ಸರ್ಕಾರ ಉರುಳಿಸುವ ಹಂತಕ್ಕೆ ಬಂತಾ ಇಬ್ಬರ ವೈಯಕ್ತಿಕ ಪ್ರತಿಷ್ಠೆ!

Public TV
2 Min Read

ಬೆಂಗಳೂರು: ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಮಹಾಕ್ರಾಂತಿ ಆಗಲಿದೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದ್ದವು. ಈ ಮಾತಿಗೆ ಪೂರಕ ಎಂಬಂತೆ ಮಂಗಳವಾರ ಮುಳಬಾಗಿಲು ಮತ್ತು ರಾಣೇಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕರಾದ ಹೆಚ್.ನಾಗೇಶ್, ಆರ್ ಶಂಕರ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದರು. ಆದ್ರೆ ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕರಿಬ್ಬರ ಪ್ರತಿಷ್ಠೆಯ ಕಾರಣವಾಯ್ತಾ ಎಂಬ ಚರ್ಚೆಗಳು ರಾಜ್ಯದಲ್ಲಿ ಶುರುವಾಗಿವೆ.

ಸರ್ಕಾರ ರಚನೆಯ ಬಳಿಕ ಬೆಳಗಾವಿಯ ರಾಜಕಾರಣ ಮೈತ್ರಿಗೆ ದೊಡ್ಡ ತಲೆನೋವನ್ನು ತಂದಿತ್ತು. ಬೆಳಗಾವಿ ಸಾಹುಕಾರರು ಅಂತಾನೇ ಕರೆಸಿಕೊಳ್ಳುವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗಿ ಬಿದ್ದಿದ್ದರು. ಈ ಮೂವರ ಜಗಳ ಸರ್ಕಾರದ ಆರಂಭದ ದಿನದಲ್ಲಿ ದಿನಕ್ಕೊಂದು ಟ್ವಿಸ್ಟ್ ಗಳನ್ನು ಪಡೆದುಕೊಂಡಿತ್ತು. ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಮತ್ತು ಅಧ್ಯಕ್ಷರ ನೇಮಕಾತಿ ವಿಷಯ ರೆಸಾರ್ಟ್ ತಲುಪಿತ್ತು. ಒಂದು ಕಡೆ ಲಕ್ಷ್ಮಿ ಹೆಬ್ಬಾಳ್ಕರ್ ರಾತ್ರೋರಾತ್ರಿ ಧರಣಿ ಕುಳಿತು, ಪಿಎಲ್‍ಡಿ ಬ್ಯಾಂಕ್ ಸದಸ್ಯರನ್ನು ರಹಸ್ಯ ತಾಣದಲ್ಲಿ ಇರಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ನಡೆಗೆ ಕೋಪಗೊಂಡ ಜಾರಕಿಹೊಳಿ ಸೋದರರು ತಮ್ಮ ಬಣದ ಅಭ್ಯರ್ಥಿಯ ಗೆಲುವಿಗಾಗಿ ಬಹಿರಂಗ ಹೇಳಿಕೆ ನೀಡಲು ತೊಡಗಿದರು. ಕೊನೆಗೆ ಈ ಸಮರಕ್ಕೆ ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟರು. ಬೆಳಗಾವಿ ರಾಜಕಾರಣಕ್ಕೆ ಶಿವಕುಮಾರ್ ಅವರು ಎಂಟ್ರಿ ನೀಡಿದ್ದು ತಪ್ಪು ಎಂದು ಜಾರಕಿಹೊಳಿ ಬ್ರದರ್ಸ್ ಗುಡುಗಿದರು. ಕೊನೆಗೆ ಪಕ್ಷದ ವರಿಷ್ಠ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿನ ನಗೆ ಬೀರಿದರು. ಅಂದು ಕಾಂಗ್ರೆಸ್ ನಾಯಕರು ನೀಡುತ್ತಿದ್ದ ಹೇಳಿಕೆಗಳು ಬಿಜೆಪಿ ಆಪರೇಷನ್ ಕಮಲ ನಡೆಸುವಂತೆ ಪ್ರೇರಪಣೆ ನೀಡಿದವು ಎಂಬ ಮಾತುಗಳಿವೆ.

ಈ ವಿವಾದ ಬಗೆಹರಿದ್ರೂ ಡಿಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಇಬ್ಬರ ನಡುವಿನ ಮುನಿಸು ಮಾತ್ರ ಶಮನಗೊಂಡಿರಲಿಲ್ಲ. ಇದಾದ ಕೆಲ ದಿನಗಳ ಬಳಿಕ ಬೆಳಗಾವಿಗೆ ಹೋದ ಡಿಕೆ ಶಿವಕುಮಾರ್ ರೈತರಿಗೆ ಜ್ಯೂಸ್ ಕುಡಿಸಿ ರೈತರ ಪ್ರತಿಭಟನೆಗೆ ತೆರೆ ಎಳೆಯುವ ಮೂಲಕ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಸಂಪುಟ ವಿಸ್ತರಣೆ ವೇಳೆಯೂ ರಮೇಶ್ ಜಾರಕಿಹೊಳಿ ಅವರಿಗೆ ಕೊಕ್ ನೀಡಿ ಸತೀಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಿದ್ದರ ಹಿಂದೆ ಡಿ.ಕೆ.ಶಿವಕುಮಾರ್ ಪ್ಲಾನ್ ಇತ್ತು ಎಂಬುವುದು ಕಾಂಗ್ರೆಸ್ ವಲಯದ ಇನ್‍ಸೈಡ್ ಸ್ಟೋರಿ.

ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಮೇಲಿನ ಕೋಪಕ್ಕೆ ತಮ್ಮ ಸಚಿವ ಸ್ಥಾನದ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಪಕ್ಷದ ನಾಯಕರ ಕೈಗು ಸಿಗದೆ ಆಪರೇಷನ್ ಕಮಲಕ್ಕೆ ಅಸಮಧಾನಿತ ಶಾಸಕರನ್ನ ಒಟ್ಟುಗೂಡಿಸುವ ಪ್ರಯತ್ನಕ್ಕೆ ರಮೇಶ್ ಜಾರಕಿಹೊಳಿ ಮುಂದಾದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡು ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಒಟ್ಟಿನಲ್ಲಿ ಮೂವರ ಜಗಳ ಆಪರೇಷನ್ ಕಮಲಕ್ಕೆ ಮುನ್ನುಡಿ ಆಯ್ತಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *