ಬೆಂಗಳೂರು: ನಗರದಿಂದ ಶಬರಿಮಲೆಗೆ ತೆರಳುತ್ತಿದ್ದ ಕಾರು ಅಪಘಾತವಾಗಿದೆ. ಇಬ್ಬರು ಯಾತ್ರಿಗಳು ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಹೊಸೂರು ಸಮೀಪದ ಸಾಮಲಪಳ್ಳಿ ಸಮೀಪ ನಡೆದಿದೆ.
ಮೃತರನ್ನು ವೇಲು(30) ಮತ್ತು ಮುನಿರತ್ನಗೌಡ(28) ಎಂದು ಗುರುತಿಸಲಾಗಿದೆ. ಇವರಿಬ್ಬರು ಗಣಪತಿ ಪುರದವರಾಗಿದ್ದಾರೆ. ಗಾಯಗೊಂಡವರನ್ನು ಇಳಯರಾಜ ಮತ್ತು ಅರಿಮುತ್ತು ಎಂದು ಗುರುತಿಸಲಾಗಿದೆ. ನಾಲ್ವರು ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅಯ್ಯಪ್ಪನ ದರ್ಶನ ಮಾಡಲು ಒಟ್ಟಾಗಿ ಕಾರಿನಲ್ಲಿ ಶಬರಿಮಲೆಯತ್ತ ಶನಿವಾರ ಬೆಳಗ್ಗೆ ಸುಮಾರು 9 ಗಂಟೆಗೆ ಹೊರಟಿದ್ದರು.
ಬೆಂಗಳೂರಿನ ಈಜಿ ಪುರಕ್ಕೆ ತಮಿಳುನಾಡಿನಿಂದ ತರಲಾಗುತ್ತಿರುವ ಕೋದಂಡರಾಮ ದೇವರ ಮೂರ್ತಿ ಸಾಮಲಪಳ್ಳ ಬಳಿ ನಿಂತಿತ್ತು. ದಾರಿಯಲ್ಲಿ ಹೋಗುವ ವಾಹನಗಳೆಲ್ಲ ನಿಧಾನವಾಗಿ ಚಲಿಸುತ್ತ ವಿಗ್ರಹವನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಅದರಂತೆ ಈ ನಾಲ್ವರು ಕಾರಿನ ವೇಗ ಕಡಿಮೆ ಮಾಡಿ ದೇವರ ವಿಗ್ರಹವನ್ನು ನೋಡುವಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ ಮುಂದೆಯೂ ಲಾರಿ ಇದ್ದ ಪರಿಣಾಮ ಎರಡು ಲಾರಿಗಳ ನಡುವೆ ಸಿಲುಕಿದ ಕಾರು ಅಪ್ಪಚಿಯಾಗಿದ್ದು, ಇಬ್ಬರೂ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ರಾಮಲಿಂಗಪ್ಪ ತಿಳಿಸಿದ್ದಾರೆ.
ಈ ಕುರಿತು ಸುಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv