ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಬೀಚನಹಳ್ಳಿ ಸಮೀಪದಲ್ಲಿ ನಡೆದಿದೆ.
ಪ್ರದೀಪ್ ಮತ್ತು ದಿವ್ಯ ಮೃತ ದುರ್ದೈವಿಗಳು. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ತಿಥಿ ಕಾರ್ಯಕ್ಕೆಂದು ಚಾಲಕ ಪ್ರದೀಪ್ ದಂಪತಿಗಳನ್ನು ಕರೆದುಕೊಂಡು ಬೆಂಗಳೂರು ಕಡೆಯಿಂದ ಹಿರೀಸಾವೆಗೆ ಹೋಗುತ್ತಿದ್ದರು.
ಇದೇ ಸಂದರ್ಭದಲ್ಲಿ ದಿವ್ಯ ಮತ್ತು ಮನೆಯವರು ಮತ್ತೊಂದು ಕಾರಿನಲ್ಲಿ ಹಾಸನದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ದಿವ್ಯಾ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿ ಎದುರು ಬದಿಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರಿನಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಎಂಟು ಜನರನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಪಘಾತದ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.