ಹೋಳಿ ಹಬ್ಬದಂದು ಹಿಂದೂ ಸಹೋದರಿಯರ ಅಪಹರಣ, ಮತಾಂತರ

Public TV
1 Min Read

ಇಸ್ಲಾಮಾಬಾದ್: ಹೋಳಿ ಹಬ್ಬದ ದಿನದಂದು ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಮತಾಂತರಗೊಂಡ ಸಹೋದರಿಯರು ಘೋಟ್ಕಿ ಜಿಲ್ಲೆಯವರಾಗಿದ್ದು, ಓರ್ವ ಬಾಲಕಿ 13 ವರ್ಷ ಹಾಗೂ ಆಕೆಯ ಸಹೋದರಿ 15 ವರ್ಷದವಳಾಗಿದ್ದಾಳೆ. ಪ್ರಭಾವಿ ವ್ಯಕ್ತಿಗಳ ಗುಂಪೊಂದು ಹೋಳಿ ಹಬ್ಬದ ದಿನವೇ ಬಾಲಕಿಯರನ್ನು ಅಪಹರಣ ಮಾಡಿತ್ತು. ಬಳಿಕ ಬಾಲಕಿಯರ ವಿವಾಹದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು.

‘ಇಸ್ಲಾಂ ಧರ್ಮಕ್ಕೆ ಸೇರುವಂತೆ ಯಾರೂ ನಮಗೆ ಬಲವಂತ ಮಾಡಿಲ್ಲ. ಮತಾಂತರವಾಗಲು ಹಾಗೂ ವಿವಾಹವಾಗುಂತೆ ಒತ್ತಡ ಹೇರಿಲ್ಲ’ ಎಂದು ಬಾಲಕಿಯರು ಮತ್ತೊಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಬಾಲಕಿಯರನ್ನು ಅಪಹರಿಸಿ ಮತಾಂತರ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ಆರಂಭಿಸಿದ್ದಾರೆ. ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಭರವಸೆಗಳನ್ನು ಪ್ರತಿಭಟನೆ ಮೂಲಕ ಮತ್ತೆ ನೆನಪು ಮಾಡಿದ್ದಾರೆ.

ಈ ಘಟನೆಯ ಕುರಿತು ವಿವರ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಸೂಚನೆ ನೀಡಿರುವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ಇಮ್ರಾಮ್ ಖಾನ್ ಅವರು ಘಟನೆಯ ಕುರಿತು ಗಮನಹರಿಸಬೇಕು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಪಾಕಿಸ್ತಾನ ಹಿಂದೂ ಸೇವಾ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಧಂಜೇಶ್ ಧಂಜಾ ಮನವಿ ಮಾಡಿಕೊಂಡಿದ್ದಾರೆ.

ಬಲವಂತವಾಗಿ ಮತಾಂತರಗೊಳಿಸುವ ವಿರುದ್ಧ ಮಸೂದೆ ಜಾರಿಗೆ ತರವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮುಂದಾಗಬೇಕಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ ಕಾರ್ಯಕಾರಿ ಎಂಪಿಎ ನಂದ ಕುಮಾರ್ ಗೋಕ್ಲಾನಿ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *