2 ವರ್ಷದಲ್ಲಿ 60 ಕಾರ್ ಕದ್ದ 2 ಅಡಿಯ ಕಳ್ಳ

Public TV
2 Min Read

ಲಕ್ನೋ: 2 ವರ್ಷದಲ್ಲಿ 60 ಕಾರುಗಳನ್ನು ಕದ್ದ 2 ಅಡಿ ಕಳ್ಳನನ್ನು ಸೇರಿ ನಾಲ್ವರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

ರೌನಕ್ ಅಲಿ ಅಲಿಯಾಸ್ ಬಬ್ಲು, ಜಮ್‍ಶೇದ್ ಅಲಿಯಾಸ್ ಬೌನಾ, ತಾಜ್ ಮೊಹಮ್ಮದ್ ಅಲಿಯಾಸ್ ಚಂದ್ ಹಾಗೂ ಯಾಕುಬ್ ಅರೆಸ್ಟ್ ಆದ ಕಳ್ಳರು. ನಾಲ್ವರು ಆರೋಪಿಗಳಲ್ಲಿ ಒಬ್ಬನ ಹೆಸರು ಬೌನಾ ಎಂದಾಗಿದ್ದು, ಆತ ಕೇವಲ 2 ಅಡಿ ಎತ್ತರವಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಸ್‍ಪಿ ರಾಜಕುಮಾರ್ ಪಾಂಡೆ, ಈ ಗ್ಯಾಂಗ್‍ಗೆ ಬೌನಾ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದನು. ಬೌನಾ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿ ಒಳಗೆ ನುಗ್ಗುತ್ತಾನೆ. ಬಳಿಕ ಆತನ ಸ್ನೇಹಿತರು ಕಾರು ಕದಿಯಲು ಸಹಾಯ ಮಾಡುತ್ತಿದ್ದರು. ಬೌನಾಗೆ ಗ್ಯಾಂಗ್‍ನ ಸದಸ್ಯರು ಮಾಸ್ಟರ್ ಮೈಂಡ್ ಎಂದೇ ಕರೆಯುತ್ತಾರೆ. ಅಲ್ಲದೆ ತಮ್ಮ ಗ್ಯಾಂಗ್‍ಗೆ ಬೌನಾ ಗ್ಯಾಂಗ್ ಎಂದೇ ಕರೆಯುತ್ತಾರೆ.

ಬಬ್ಲು ಹಾಗೂ ಬೌನಾ ಸಂಬಂಧದಲ್ಲಿ ಮಾವ-ಅಳಿಯ. ಪೊಲೀಸರು ಆರೋಪಿ ಬಬ್ಲುನನ್ನು ವಿಚಾರಣೆ ನಡೆಸಿದಾಗ ಆತ, ನಾನು ಹಾಗೂ ನನ್ನ ಅಳಿಯ ಕಾರು ಕದಿಯುವುದರಲ್ಲಿ ಎತ್ತಿದ ಕೈ. ಆತ ಕಳೆದ 2 ವರ್ಷಗಳ ಹಿಂದೆ ಗ್ಯಾಂಗ್‍ಗೆ ಎಂಟ್ರಿ ಕೊಟ್ಟಿದ್ದನು. ಗ್ಯಾಂಗ್‍ನಲ್ಲಿ ಸೋನು ಎಂಬವನು ಇದ್ದು, ಆತ ಆರ್ಡರ್ ಪಡೆದು ಯಾವ ಕಾರು ಕದಿಯಬೇಕು ಎಂದು ನಮಗೆ ಹೇಳುತ್ತಿದ್ದನು. ಇದಾದ ಬಳಿಕ ನಾವು ಗಾಜು ಒಡೆದು ಕಾರಿನೊಳಗೆ ಹೋಗಿ ಇಗ್ನಿಶಿಯನ್‍ನನ್ನು ಮುರಿದು ಹಾಕುತ್ತಿದ್ದೆವು. ನಂತರ ಕಾರಿನ ಮಾಸ್ಟರ್ ಕೀ ಅಥವಾ ಕಾರಿನ ವೈರನ್ನು ಜೋಡಿಸಿ ಸ್ಟಾರ್ಟ್ ಮಾಡಿ ಪರಾರಿ ಆಗುತ್ತಿದ್ದೆವು. ಬೌನಾ ಈವರೆಗೂ 60 ಕಾರುಗಳನ್ನು ಕದಿದ್ದಾನೆ ಎಂದು ಹೇಳಿದ್ದಾನೆ.

ಕಾರು ಕದ್ದ ನಂತರ ಅದನ್ನು ತಮ್ಮ ಸ್ನೇಹಿತ ಚಂದ್‍ನ ಗ್ಯಾರೇಜ್‍ನಲ್ಲಿ ಪಾರ್ಕ್ ಮಾಡುತ್ತಿದ್ದೆವು. ಅಲ್ಲಿ ಪ್ಲೇಟ್ ಹಾಗೂ ಕಾರಿಗೆ ಚಿಕ್ಕಪುಟ್ಟ ಬದಲಾವಣೆ ಮಾಡಿ ಖಾಲಿಯಿರುವ ಫ್ಲ್ಯಾಟ್‍ಗಳಲ್ಲಿ ಪಾರ್ಕ್ ಮಾಡುತ್ತಿದ್ದೆವು. ಇದೆಲ್ಲಾ ಆದ ಬಳಿಕ ಸೋನು ಈ ಕಾರುಗಳನ್ನು ಗ್ರಾಹಕರಿಗೆ ಮಾರುತ್ತಿದ್ದನು. ಕಾರು ಏನಾದರೂ ಮಾರಾಟವಾಗಲಿಲ್ಲ ಎಂದರೆ ಅದರ ಭಾಗಗಳನ್ನು ತೆಗೆದು ಯಾಕುಬ್ ಅದನ್ನು ದೆಹಲಿಯಲ್ಲಿ ಮಾರುತ್ತಿದ್ದನು ಎಂದು ಬಬ್ಲು ಪೊಲೀಸರಿಗೆ ತಿಳಿಸಿದ್ದಾನೆ.

ಸಿಕ್ಕಿಬಿದ್ದಿದ್ದು ಹೇಗೆ?
ಮಂಗಳವಾರ ಬಿಜೇಂದ್ರ ಸಿಂಗ್ ಎಂಬವರು ಇಬ್ಬರು ಕಳ್ಳರು ನಂಬರ್ ಪ್ಲೇಟ್ ಇಲ್ಲದಿರುವ ಕಾರಿನಲ್ಲಿ ಬರುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಳ್ಳರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಇಬ್ಬರನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳರು ತಮ್ಮ ತಪ್ಪನ್ನು ಒಪ್ಪಿಕೊಂಡು ಕದ್ದಿರುವ ಕಾರುಗಳನ್ನು ನಿಠೋರಾ ರೋಡಿನಲ್ಲಿ ಪಾರ್ಕ್ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳ ಮಾತು ಕೇಳಿ ಪೊಲೀಸರು ಸ್ಥಳಕ್ಕೆ ತಲುಪಿ 8 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅಲ್ಲಿದ್ದ ಮೂವರನ್ನು ಪೊಲೀಸರು ಬಂಧಿಸಲು ಪ್ರಯತ್ನಿದಾಗ ಒಬ್ಬ ಪರಾರಿಯಾಗಿದ್ದಾನೆ.

ವರದಿಗಳ ಪ್ರಕಾರ, ಕಾರು ಕದಿಯುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೌನಾ ಕಾಣಿಸಿಕೊಂಡಿದ್ದು, ಆತನ ಎತ್ತರ ನೋಡಿ ಪೊಲೀಸರು ಚಿಕ್ಕ ಹುಡುಗ ಎಂದು ಬಿಡುತ್ತಿದ್ದರು ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *