ಗಂಗಮ್ಮಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ – ಇಬ್ಬರು ಮಹಿಳೆಯರು ಅರೆಸ್ಟ್!

Public TV
2 Min Read

– ಮಗಳ ಮನೆಗೆ ಬಂದಿದ್ದ ತಾಯಿ ಸರಸ್ವತಮ್ಮ ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರ ಬಲಿಯಾಗಿದೆ. ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಮ್ಮ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿದೆ. 56 ವರ್ಷದ ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ನಿವಾಸಿ. ಊರ ಹಬ್ಬಕ್ಕೆಂದು ಮಗಳು ಗೌರಿ ಮನೆಗೆ ಬಂದಿದ್ರು. ಆದರೆ ವಿಧಿಯ ಆಟವೇ ಬೇರೆ ಇದ್ದಿದರಿಂದ ಬಾರದ ಲೋಕಕ್ಕೆ ಸರಸ್ವತಮ್ಮ ಹೋಗಿದ್ದಾರೆ. ಇನ್ನೂ 11 ಮಂದಿ ಕೋಲಾರ-ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಳ್ವಾಡಿ ವಿಷ ದುರಂತದ ಬಳಿಕ ಎಲ್ಲವನ್ನು ಅನುಮಾನದಿಂದ ನೋಡಬೇಕಾಗಿ ಬಂದಿದೆ. ಗಂಗಮ್ಮನ ಪ್ರಸಾದಕ್ಕೆ ಯಾರಾದ್ರೂ ಉದ್ದೇಶಪೂರ್ವಕವಾಗಿ ವಿಷ ಬೆರೆಸಿ ಮಾರಣಹೋಮಕ್ಕೆ ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಕಾಡುತ್ತಿದೆ. ಇದೇ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ಕವಿತಾ ಸಂಬಂಧಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ಕೂಡ ದಾಖಲಾಗಿದೆ. ನಾವು ವಿಷ ಬೆರೆಸಿಲ್ಲ ಎಂದು ಲಕ್ಷ್ಮಿ ಹಾಗೂ ಅಮರಾವತಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

ವೈದ್ಯರ ಹೇಳಿಕೆ ಪ್ರಕಾರ, ಗಂಗಮ್ಮನ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆ ಇಲ್ಲ. ಬೆಳಗ್ಗೆ ಸಿದ್ಧಪಡಿಸಿದ್ದ ಪ್ರಸಾದವನ್ನ ಸಂಜೆ ವಿತರಿಸಲಾಗಿದೆ. ಪ್ರಸಾದ ರೆಡಿಯಾಗಿ ಹೆಚ್ಚು ಸಮಯ ಆಗಿದ್ದರಿಂದ ಅದು ವಿಷಾಹಾರವಾಗಿ ಪರಿವರ್ತನೆಗೊಂಡಿರಬಹುದು. ಅಥವಾ ಪ್ರಸಾದ ಸಿದ್ಧಪಡಿಸಿದ ವ್ಯಕ್ತಿಗೆ ಸ್ಟೈಫಲೋ ಕೋಕುಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಸೋಂಕಿನ ಬ್ಯಾಕ್ಟೀರಿಯಾ ಪ್ರಸಾದದ ಜೊತೆ ಭಕ್ತರ ಉದರ ಸೇರಿ ವಿಷಾಹಾರವಾಗಿ ಬದಲಾಗಿರಬಹುದು.

ಪ್ರಸಾದ ತಯಾರಿಕೆ ವೇಳೆ ಕೆಟ್ಟು ಹೋದ ಕೊಬ್ಬರಿ, ಅವಧಿ ಮೀರಿದ ತುಪ್ಪ ಬಳಸಿದ್ದ ವಿಚಾರವನ್ನ ಲಕ್ಷ್ಮಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ದೇವಾಲಯದಲ್ಲಿ ನೂರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.. ಆದರೆ ಮೂರು ಕುಟುಂಬಗಳ ಸದಸ್ಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಮುಂದುವರೆದಿದೆ. ಇದು ಸುಳ್ವಾಡಿ ವಿಷ ದುರಂತ ಆಗದಿದ್ರೆ ಅಷ್ಟೇ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

https://www.youtube.com/watch?v=5ev4AgezPd4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *