ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ – ಚಾಲಕ ಸೇರಿ ಇಬ್ಬರು ಸಾವು, 34 ಪ್ರಯಾಣಿಕರಿಗೆ ಗಾಯ

Public TV
1 Min Read

ಶಿವಮೊಗ್ಗ: 2 ಖಾಸಗಿ ಬಸ್‌ಗಳ (Bus) ನಡುವೆ ಮುಖಾಮುಖಿ ಡಿಕ್ಕಿ (Collision) ಸಂಭವಿಸಿ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಬಸ್‌ಗಳಲ್ಲಿದ್ದ 34 ಪ್ರಯಾಣಿಕರು ಗಾಯಗೊಂಡಿರುವ ಭೀಕರ ಘಟನೆ ಶಿವಮೊಗ್ಗದ (Shivamogga) ಚೋರಡಿ ಸಮೀಪ ನಡೆದಿದೆ.

ಚೋರಡಿ ಸಮೀಪದ ಕುಮುದ್ವತಿ ಸೇತುವೆ ಮೇಲೆ ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ಶಿಕಾರಿಪುರಕ್ಕೆ ತೆರಳುತ್ತಿದ್ದ ಬಸ್ ಹಾಗೂ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ (Accident) ರಭಸಕ್ಕೆ ಎರಡು ಬಸ್‌ಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಂದು ಬಸ್‌ನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಪ್ರಯಾಣಿಕರನ್ನು ಅಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್‌ಗಳಲ್ಲಿ ಸುಮಾರು 70 ರಿಂದ 80 ಪ್ರಯಾಣಿಕರಿದ್ದರು ಎನ್ನಲಾಗಿದೆ.

ಅಪಘಾತ ಸಂಭವಿಸಿದ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಸಂಸದ ಬಿವೈ ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಅಶೋಕ್ ನಾಯ್ಕ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದ್ದಾರೆ.

ಬಸ್‌ಗಳ ಮುಖಾಮುಖಿ ಡಿಕ್ಕಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಬಸ್ ಚಾಲಕ ತಿಪ್ಪೆಸ್ವಾಮಿ, ಮತ್ತೊಬ್ಬ ಪ್ರಯಾಣಿಕ 43 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, 34 ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಕಾರು, ಟಿಟಿ ಮುಖಾಮುಖಿ ಡಿಕ್ಕಿ – ಮಗು ಸೇರಿ ಇಬ್ಬರು ಸ್ಥಳದಲ್ಲೇ ಸಾವು

ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ಬಗ್ಗೆ ವದಂತಿ ಹರಡಿದ್ದು, ಜನರು ಗಾಬರಿಗೊಳ್ಳುವಂತೆ ಮಾಡಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದ್ದು, ಅಪಘಾತದಿಂದಾಗಿ ಕೆಲ ಸಮಯ ಆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದನ್ನೂ ಓದಿ: ಪ್ರೇಯಸಿಯ ಕತ್ತು ಕುಯ್ದು ಆತ್ಮಹತ್ಯೆಗೆ ಶರಣಾದ ಪ್ರೇಮಿ

Share This Article