ವಸತಿ ಕಟ್ಟಡಗಳು ಕುಸಿದು 3 ಮಂದಿ ಸಾವು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ!

Public TV
1 Min Read

ನವದೆಹಲಿ: ಎರಡು ವಸತಿ ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ 50 ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಗ್ರೇಟರ್ ನೊಯ್ಡಾದ ಶಾಹಬೆರಿ ಗ್ರಾಮದಲ್ಲಿರುವ ಎರಡು ಕಟ್ಟಡಗಳು ಉರುಳಿಬಿದ್ದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಕಟ್ಟಡ ಕುಸಿದು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಕಾರ್ಯಾಚರಣೆ ವೇಳೆ ಈವರೆಗೂ ಮೂರು ಮೃತದೇಹಗಳನ್ನು ಹೊರೆ ತೆಗೆದಿದ್ದು, ಕಟ್ಟಡ ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಕಟ್ಟಡ ನಿರ್ಮಾಣದ ವೇಳೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರ ಪರಿಣಾಮ ದುರಂತ ಸಂಭವಿಸಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಕಟ್ಟಡ ಮಾಲೀಕನಾದ ಗಂಗಾ ಶರಣ್ ದ್ವೀವೇದಿ, ಬ್ರೋಕರ್ ಕಾಸೀಮ್ ಹಾಗೂ ಮತ್ತೊರ್ವನನ್ನು ಬಂಧಿಸಿದ್ದಾರೆ. ಅಲ್ಲದೇ ಮಾಲೀಕರ ವಿರುದ್ಧ ಕಳಪೆ ಕಾಮಗಾರಿ ನಡೆಸಿ ಕಟ್ಟಡ ನಿರ್ಮಾಣ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದು, ಜಿಲ್ಲಾ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನೆರವಾಗುವಂತೆ ಆದೇಶಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಿಲ್ಲಾ ಅಧಿಕಾರಿಗಳ ತಂಡಗಳನ್ನು ನಿಯೋಜಿಸುವಂತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಕ್ಷಣಾ ಪಡೆಯ ಅಧಿಕಾರಿಯಾದ ಪಿ.ಕೆ.ಶ್ರೀವತ್ಸವ್ ಮಾತನಾಡಿ, ಘಟನಾ ಸ್ಥಳದಲ್ಲಿ ಒಟ್ಟು 4 ಎನ್‍ಡಿಆರ್‍ಎಫ್ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಶ್ವಾನ ದಳವು ಸಹ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ 50 ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ತಿಳಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *