ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ – ಬೆಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್

1 Min Read

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿ, ನಿಂದಿಸಿದ್ದ ಪ್ರಕರಣ ಸಂಬಂಧ ಬೆಂಗಳೂರು (Bengaluru) ಮೂಲದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಮೂಲದ ನಿತಿನ್ ಮತ್ತು ಚಿಕ್ಕಬಾಣಾವಾರ ಮೂಲದ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ನಿತಿನ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹಾಗೂ ಚಂದ್ರಶೇಖರ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನನ್ನ ದೂರಿಗೆ ನಿರ್ಲಕ್ಷ್ಯ, ಬೇರೆ ಮಹಿಳೆಯ ದೂರಿಗೆ ಒಂದೇ ದಿನದಲ್ಲಿ ಕ್ರಮ: ವಿಜಯಲಕ್ಷ್ಮಿ ಬೇಸರ

2025ರ ಡಿಸೆಂಬರ್‌ನಲ್ಲಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ವಿಜಯಲಕ್ಷ್ಮಿ ಅವರ ಕುರಿತು ಕೆಲವು ಅಶ್ಲೀಲ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರ ವಿರುದ್ಧ ಸಿಡಿದ ಅವರು 15 ಇನ್‌ಸ್ಟಾಗ್ರಾಂ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಾಮೆಂಟ್ ವಿರುದ್ಧ ಫೋಟೋ ಸಮೇತ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಸೈಬರ್ ಪೊಲೀಸರು ಸದ್ಯ 15 ಐಡಿಗಳ ಪೈಕಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ಇನ್ನೂ ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಅವರನ್ನು ಭೇಟಿಯಾಗಿದ್ದರು. ಬಳಿಕ ಪೋಸ್ಟ್ ಮಾಡಿ, ಅತೃಪ್ತಿ ತೋಡಿಕೊಂಡಿದ್ದರು. ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ನಂಬಿದ್ದೇನೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದಿದ್ದರು.

ನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಬೇರೆ ಮಹಿಳೆ ನೀಡಿದ ಮತ್ತೊಂದು ದೂರಿನ ಮೇಲೆ ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ ಅಂತ ಪರೋಕ್ಷವಾಗಿ ರಮ್ಯಾ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ವಿಜಯಲಕ್ಷಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಇದನ್ನು ಪರಿಶೀಲಿಸುವುದಾಗಿ ಆಯುಕ್ತರು ಹೇಳಿದ್ದರು.ಇದನ್ನೂ ಓದಿ: ಕೊನೆಯ ಕ್ಯಾಪ್ಟನ್ಸಿ ಆಟದಲ್ಲಿ ಮೋಸ ಮಾಡಿದ್ರಾ ಧನುಷ್‌? – ಯಾರಾಗ್ತಾರೆ ಮನೆಯ ಕ್ಯಾಪ್ಟನ್?

Share This Article