ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಧೋನಿಗೂ ಸಂಬಂಧ ಸರಿ ಇಲ್ವೇ?

Public TV
2 Min Read

ಪುಣೆ: ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಮಾಜಿ ನಾಯಕ ಧೋನಿಗೂ ಸಂಬಂಧ ಸರಿ ಇಲ್ಲವೇ ಹಿಗೊಂದು ಪ್ರಶ್ನೆ ಈಗ ಎದ್ದಿದೆ.

ಪುಣೆ ತಂಡದ ಮಾಲೀಕರಾಗಿರುವ ಸಂಜಯ್ ಗೋಯಂಕಾ ಅವರ ಸಹೋದರ ಹರ್ಷ ಗೋಯಂಕಾ ಅವರು ಧೋನಿ ಕುರಿತಾಗಿ ಮಾಡಿರುವ ಟ್ವೀಟ್‍ನಿಂದಾಗಿ ಈ ಪ್ರಶ್ನೆ ಎದ್ದಿದೆ.

ಗುರುವಾರ ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯದಲ್ಲಿ ಪುಣೆ 7 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು, ಈ ಪಂದ್ಯದಲ್ಲಿ ನಾಯಕ ಆಸ್ಟ್ರೇಲಿಯಾದ ಸ್ಮಿತ್ 84 ರನ್(54 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿ ಜಯಕ್ಕೆ ಕಾರಣವಾಗಿದ್ದರು. ಈ ಜಯದ ಬಳಿಕ ಟ್ವೀಟ್ ಮಾಡಿರುವ ಹರ್ಷ ಗೋಯಂಕಾ, ಕಾಡಿನ ರಾಜ ಯಾರು ಎನ್ನುವುದನ್ನು ಸ್ಮಿತ್ ನಿರೂಪಿಸಿದ್ದಾರೆ. ನಾಯಕನಾಗಿ ಉತ್ತಮವಾಗಿ ಆಡಿದ್ದಾರೆ. ಅವರನ್ನು ನಾಯಕರನ್ನಾಗಿ ನೇಮಿಸಿದ್ದು ಉತ್ತಮ ಬೆಳವಣಿಗೆ ಎಂದು ಬರೆದುಕೊಂಡಿದ್ದಾರೆ.

ಧೋನಿ ನಾಯಕತ್ವವನ್ನು ತೆಗಳಿದ್ದಕ್ಕೆ ಧೋನಿ ಅಭಿಮಾನಿಗಳು ಹರ್ಷ ಅವರನ್ನ ಟ್ರಾಲ್‍ಮಾಡಿದ್ದಾರೆ. ಇದಕ್ಕೆ ಹರ್ಷ ಧೋನಿ ಅತ್ಯುತ್ತಮ ಬ್ಯಾಟ್ಸ್ ಮನ್ ಹೌದು. ಆದರೆ ಇಂದು ಸ್ಮಿತ್ ಅವರ ದಿನ ಎಂದು ಹೇಳುವ ಮೂಲಕ ತಮ್ಮ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಟ್ವೀಟ್‍ಗೆ ಧೋನಿ ಅಭಿಮಾನಿಗಳು, ಇವತ್ತು ಸ್ಮಿತ್ ಅವರ ದಿನ ಆಗಿರಬಹುದು. ಆದರೆ ಬೇರೆ ವ್ಯಕ್ತಿಗಳಿಗೆ ಹೋಲಿಸುವ ಮುನ್ನ ಕ್ರಿಕೆಟ್ ದಂತಕಥೆಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ. ದೇಶಕ್ಕಾಗಿ ಧೋನಿ ಎಲ್ಲ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಯಾಗಿ ಹರ್ಷ ಅವರು ಪುಣೆ ತಂಡದ ಬ್ಯಾಟ್ಸ್ ಮನ್‍ಗಳ ಸರಾಸರಿ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಮುನ್ನಾ ದಿನ ನಾಯಕ ಪಟ್ಟ: ಐಪಿಎಲ್ 2017ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮುನ್ನಾ ದಿನ ನಾಯಕ ಸ್ಥಾನದಿಂದ ಧೋನಿ ಅವರನ್ನು ಕಿತ್ತುಹಾಕಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್‍ಗೆ ಪಟ್ಟ ಕಟ್ಟಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪುಣೆ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯಂಕಾ, ಧೋನಿ ನಾಯಕತ್ವದಿಂದ ಕೆಳಗಡೆ ಇಳಿಯಲಿಲ್ಲ. ಕಳೆದ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕಿರಿಯ ಆಟಗಾರನ ನೇತೃತ್ವದಲ್ಲಿ ತಂಡವನ್ನು ಮುನ್ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

ಐಪಿಎಲ್ 9ರ ಆವೃತ್ತಿಯ 14 ಪಂದ್ಯದಲ್ಲಿ ಪುಣೆ 5 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು. ಧೋನಿ 12 ಇನ್ನಿಂಗ್ಸ್ ಒಂದು ಅರ್ಧಶತಕ ಸಹಿತ 284 ರನ್‍ಗಳಿಸಿದ್ದರು.

ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ಶಿಫಾರಸಿನಂತೆ ಐಪಿಎಲ್‍ನಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ ಅಮಾನತುಗೊಂಡಿತ್ತು. ಈ ಹಿನ್ನೆಲೆಯಲ್ಲಿ 2015ರವರೆಗೆ ಚೆನ್ನೈ ತಂಡವನ್ನು ಮುನ್ನಡೆಸಿದ್ದ ಧೋನಿ 2016ರ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದರು.

ಸತತ 8 ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದ್ದರು. 2010 ಮತ್ತು 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. 2008, 2012, 2013, 2015 ರಲ್ಲಿ ರನ್ನರ್ ಅಪ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *