ಮೋದಿ ಆಗಮನಕ್ಕೂ ಮುನ್ನ ಸಿಎಂ & ಬಿಎಸ್‍ವೈ ಟ್ವಿಟರ್ ವಾರ್!

Public TV
2 Min Read

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿದೆ. ಬೆಂಗಳೂರು ನಗರಕ್ಕೆ ಆಗಮಿಸುವ ಮೋದಿ ಹೊಸ ಘೋಷಣೆಗಳನ್ನು ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಟಾಂಗ್ ನೀಡುವ ಮೂಲಕ ಪ್ರಧಾನಿಗಳಿಗೆ ಸ್ವಾಗತ ಕೋರಿದ್ದಾರೆ. ಮುಖ್ಯಮಂತ್ರಿ ಅವರ ಸ್ವಾಗತದ ಟ್ವೀಟ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಖಡಕ್ ತಿರುಗೇಟು ನೀಡಿದ್ದಾರೆ.

ಸಿಎಂ ಟ್ವೀಟ್‍ನಲ್ಲಿ ಬರೆದಿದ್ದು ಹೀಗೆ: ನಮ್ಮ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಹೂಡಿಕೆ, ಅಭಿವೃದ್ಧಿ ಮತ್ತು ಬದಲಾವಣೆಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕ ಅಭಿವೃದ್ದಿ ರಾಜ್ಯಗಳ ಮಾದರಿಯಾಗಿದೆ. ದೇಶದ ಹಲವು ವಿಭಾಗಗಳಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕದ ಈ ಯಶಸ್ಸು ಭಾರತವನ್ನು ಹೆಮ್ಮೆ ಪಡುವಂತೆ ಮಾಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಅಂತ ಬರೆದುಕೊಂಡಿದ್ದಾರೆ.

ಹೊಸ ಕಲ್ಪನೆ/ಆವಿಷ್ಕಾರದ ಕೇಂದ್ರ ಬಿಂದುವಾಗಿರುವ ನಮ್ಮ ಬೆಂಗಳೂರಿಗೆ ಇಂದು ಪ್ರಧಾನಿಗಳು ಆಗಮಿಸುತ್ತಿರುವುದು ನನಗೆ ಸಂತೋಷವನ್ನು ತಂದಿದೆ. ರಾಜ್ಯದ ಜನತೆಯ ಪರವಾಗಿ ಕರ್ನಾಟಕದ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ವಿವಾದವನ್ನು ಇತ್ಯರ್ಥಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು #ನಮ್ಮಕರ್ನಾಟಕಫಸ್ಟ್ (#NammaKarnatakaFirst) ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮದೇ ಸ್ಟೈಲ್ ಮೂಲಕ ವ್ಯಂಗ್ಯವಾಗಿ ಮೋದಿ ಅವರಿಗೆ ಸ್ವಾಗತ ಮಾಡಿದ್ದಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಟ್ವಿಟ್ಟರ್ ನಲ್ಲಿ ಖಾರವಾಗಿಯೇ ಉತ್ತರ ನೀಡಿದ್ದಾರೆ.

ಬಿಎಸ್‍ವೈ ಟ್ವೀಟ್: ಪ್ರಧಾನಿಗಳಿಗೆ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳು. ಹೌದು, ಕರ್ನಾಟಕ ಹಲವು ವಿಚಾರಗಳಲ್ಲಿ ಮೊದಲನೇಯ ಸ್ಥಾನದಲ್ಲಿದೆ. ಅವುಗಳು ಹೀಗಿವೆ, ಭ್ರಷ್ಟಾಚಾರದಲ್ಲಿ ನಂಬರ್ ಒನ್, 3,500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಅಧಿಕಾರಿಗಳ ನಿಗೂಢ ಸಾವು, ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ, ಬೆಂಗಳೂರು ಅವನತಿ ಅಂತಾ ಬರೆದಿದ್ದಾರೆ. ಕೊನೆಗೆ #ಕರ್ನಾಟಕಟ್ರಸ್ಟ್ ( #KarnatakaTrustsModi)ಮೋದಿ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಇಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಮೋದಿ ಅವರ ಆಗಮನದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಮಹದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *