ಕೊರೊನಾ ಜಾಗೃತಿ ಮೂಡಿಸಲು ರಾಹುಲ್ ದ್ರಾವಿಡ್‍ರನ್ನು ಉಲ್ಲೇಖಿಸಿದ ನೆಟ್ಟಿಗ

Public TV
4 Min Read

– ದ್ರಾವಿಡ್‍ಗೆ ಸಲ್ಲಿಸಿದ ‘ದಿ ಬೆಸ್ಟ್ ಟ್ರಿಬ್ಯೂಟ್’ ಎಂದ ನೆಟ್ಟಿಗರು

ಮುಂಬೈ: ವಿಶ್ವದೆಲ್ಲೆಡೆ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರಗಳು, ಸ್ಟಾರ್ ನಟರು, ಕ್ರೀಡಾಪಟುಗಳು ಸೇರಿದಂತೆ ಮಾಧ್ಯಮಗಳು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರು ಈ ಕುರಿತ ಜಾಗೃತಿ ಮೂಡಿಸುವ ಸಂದೇಶಗಳನ್ನು ಹಂಚಿಕೊಂಡು ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಕೊರೊನಾ ಕುರಿತು ಜಾಗೃತಿ ಮೂಡಿಸಲು ನೆಟ್ಟಿಗನೊಬ್ಬ ರಾಹುಲ್ ದ್ರಾವಿಡ್‍ರನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ರಾಹುಲ್ ದ್ರಾವಿಡ್ 2012ರ ವೃತ್ತಿ ಜೀವನದ ಅಂತ್ಯದವರೆಗೂ ಅತ್ಯುತ್ತಮ ಪ್ರದರ್ಶನಗಳ ಮೂಲಕ ಗಮನಸೆಳೆದಿದ್ದರು. ಈ ಅವಧಿಯಲ್ಲಿ ದ್ರಾವಿಡ್ ಅವರ ಜೀನದ ಸ್ಮರಣಿಯ ಘಟನೆಗಳನ್ನು ನೆಟ್ಟಿಗ ಸಾಗರ್ ಮೆಲುಕು ಹಾಕಿದ್ದಾರೆ. ವೃತ್ತಿದಲ್ಲಿ ತಂಡದಕ್ಕೆ ಬೆನ್ನೆಲುಬಾಗಿ ನಿಂತಿದ್ದ ದ್ರಾವಿಡ್ ಯುವ ಸಮೂಹಕ್ಕೆ ಪ್ರೇರಣೆಯಾಗಿದ್ದು, ನಿವೃತ್ತಿಯ ಬಳಿಕವೂ ಕಿರಿಯ ಆಟಗಾರರಿಗೆ ಮಾರ್ಗದರ್ಶರಾಗಿ ನಿಂತು ಎಲ್ಲರ ಮೆಚ್ಚುಗೆ ಪಡೆದಿದ್ದರು. ಸದ್ಯ ದ್ರಾವಿಡ್ ಬೆಂಗಳೂರು ಕ್ರಿಕೆಟ್ ಆಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶಿಸಿದ ನೆಟ್ಟಿಗ ಸಾಗರ್ ರಾಹುಲ್ ದ್ರಾವಿಡ್‍ರನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿದ್ದು, ವೃತ್ತಿ ಜೀವನದ ವಿವಿಧ ಹಂತಗಳಲ್ಲಿ ದ್ರಾವಿಡ್ ಅವರು ನಿರ್ವಹಿಸಿದ ಕಾರ್ಯದ ಫೋಟೋಗಳನ್ನು ಶೇರ್ ಮಾಡಿ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹಣೆ ಬರಹ ನೀಡಿದ್ದಾರೆ. ಇದರೊಂದಿಗೆ ರಾಹುಲ್ ದ್ರಾವಿಡ್ ಅವರ ವೃತ್ತಿ ಜೀವನವನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ.

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ದಿನ ಪೂರ್ತಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಬೆನ್ನಲುಬಾಗಿ ನಿಂತಿದ್ದ ದ್ರಾವಿಡ್ ಹಾಗೂ ಲಕ್ಷ್ಮಣ್ ಅವರ ಫೋಟೋವನ್ನು ಟ್ವೀಟ್ ಮಾಡಿದ್ದು, ಮತ್ತೊಂದು ಫೋಟೋದಲ್ಲಿ 2011ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಓವೆಲ್ ಟೆಸ್ಟ್ ಪಂದ್ಯದಲ್ಲಿ 146 ರನ್ ಸಿಡಿಸಿ ಮಿಂಚಿದ್ದ ದ್ರಾವಿಡ್‍ರ ಫೋಟೋವನ್ನು ಸಾಗರ್ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ಭಯಪಡಬೇಡಿ. ನೀವು ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ತಾಳ್ಮೆಯಿಂದ ಜಯಿಸಬಹುದು’. ‘ಕಠಿಣ ಸಮಯ ಉಳಿಯುವುದಿಲ್ಲ, ಅದನ್ನು ಸಮರ್ಥ ವ್ಯಕ್ತಿಗಳು ನಿಭಾಯಿಸುತ್ತಾರೆ’ ಎಂದು ಬರೆದುಕೊಂಡು ಕೊರೊನಾಗೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ರಾಹುಲ್ ದ್ರಾವಿಡ್ ಆಸೀಸ್ ವಿರುದ್ಧ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ‘ವಿವಿಧ ಸನ್ನಿವೇಶಗಳಿಗೆ ತಕ್ಕಂತೆ ಸಮರ್ಥವಾಗಿ ನಿಭಾಯಸಿಲು ಸಿದ್ಧರಾಗಿರಿ’ ಎಂದು ಬರೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಅವರು ಕೂಡ ತಮ್ಮ ಅವಧಿಯಲ್ಲಿ ತಂಡದ ನಾಯಕ ಕೇಳಿದ ಕೂಡಲೇ ಕೀಪರ್ ಹಾಗೂ ಫೀಲ್ಡರ್ ಆಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರುತ್ತಿದ್ದರು.

47 ವರ್ಷದ ರಾಹುಲ್ ದ್ರಾವಿಡ್ ತಮ್ಮ ಬ್ಯಾಟಿಂಗ್ ಸಮಯದಲ್ಲಿ ಬೌಲರ್ ಕಠಿಣ ಎಸೆತಗಳನ್ನು ಎದುರಿಸೋ ಬದಲು ಸಮಯ ತಕ್ಕಂತೆ ಅವುಗಳನ್ನು ಆಡದೆ ಬಿಡುವುದರಲ್ಲೂ ನಿಸ್ಸೀಮರಾಗಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿ ‘ಸಂಭವನೀಯ ಅಪಾಯವನ್ನು ತಪ್ಪಿಸುವ ಮಾರ್ಗವೆಂದರೆ ಅವುಗಳಿಂದ ದೂರ ಉಳಿಯುವುದು’ ಎಂದಿದ್ದಾರೆ.

ವೃತ್ತಿ ಜೀವನದ ಅವಧಿಯಲ್ಲಿ ವಿವಾದಗಳಿಂದ ಬಹುದೂರವೇ ಉಳಿದಿದ್ದ ರಾಹುಲ್ ಅವರು 2004 ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ತೆಗೆದುಕೊಂಡಿದ್ದ ನಿರ್ಧಾರ ಹೆಚ್ಚು ಟೀಕೆಗೆ ಗುರಿಯಾಗಿತ್ತು. ಪಂದ್ಯದಲ್ಲಿ ಸಚಿನ್ ಅವರು 194 ರನ್ ಗಳಿಸಿದ್ದ ವೇಳೆ ನಾಯಕರಾಗಿದ್ದ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿರುವ ಸಾಗರ್, ‘ಇನ್ನೊಬ್ಬರ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಚಿಂತಿಸದೆ ಸಮಯ ಸರಿಯಾಗಿ ನಿಮಗೆ ಸರಿ ಎಂದು ಭಾವಿಸಿದಾಗ ನಿಮ್ಮ ತಂಡದ ಸದಸ್ಯರನ್ನು ವಾಪಸ್ ಕರೆಯಿರಿ’ ಎಂದಿದ್ದಾರೆ. ಪೃಥ್ವಿ ಶಾ ಅವರೊಂದಿಗೆ ಅಂಡರ್-19 ವಿಶ್ವಕಪ್ ಎತ್ತಿಕೊಂಡಿರುವ ಫೋಟೋಗೆ ‘ನೀವು ಕಲೆಯನ್ನು ಕರಗತ ಮಾಡಿಕೊಂಡಾಗ ಅದನ್ನು ಇತರರಿಗೂ ಕಲಿಸಿ’ ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಕ್ಯಾಚ್ ಪಡೆದ ಫೋಟೋ ಟ್ವೀಟ್ ಮಾಡಿ, ‘ಸ್ವಚ್ಛ ಹಾಗೂ ಸುರಕ್ಷಿತ ಕೈಗಳನ್ನು ಹೊಂದಿರುವುದು ಬಹುಮುಖ್ಯ’ ಎಂದು ಹೇಳಿದ್ದಾರೆ. ಸಾಗರ್ ಅವರ ಈ ಟ್ವೀಟ್‍ಗಳು ರಾಹುಲ್ ದ್ರಾವಿಡ್ ಅವರಿಗೆ ಸಲ್ಲಿಸಿದ ಅತ್ಯುತ್ತಮ ಗೌರವ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 16 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ರಾಹುಲ್ ದ್ರಾವಿಡ್ ಅವರು 24 ಸಾವಿರ ರನ್ ಗಳಿಸಿ, ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ ಭಾರತದ ಪರ ಅತಿ ಹೆಚ್ಚು ರನ್‍ಗಳಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *