ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ಆರೋಪಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಆಟೋ ಚಾಲಕ

Public TV
2 Min Read

ಶಿವಮೊಗ್ಗ: ಬಿಜೆಪಿಗೆ (BJP) ವೋಟ್ ಹಾಕಿದ್ದೆ ಎಂದು ಹೇಳಿದ್ದಕ್ಕೆ ಇಬ್ಬರು ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದರು ಎಂದು ಹಲ್ಲೆಗೊಳಗಾಗಿದ್ದ ಆಟೋ ಚಾಲಕ (Auto Driver) ಹರೀಶ್ ರಾವ್ ಮಾಜಿ ಸಚಿವ ಈಶ್ವರಪ್ಪ (KS Eshwarappa) ಎದುರು ಕಣ್ಣೀರಿಡುತ್ತಾ ಗೋಳಾಡಿದ್ದ. ಆದರೆ ಈಗ ಈ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.

ಸೋಮವಾರ ಮುಂಜಾನೆ ಶಿವಮೊಗ್ಗ (Shivamogga) ಎಸ್‌ಪಿ ಮಿಥುನ್ ಕುಮಾರ್ ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶ್ವರಪ್ಪನವರ ಬಳಿ ತನ್ನ ಆಟೋ ಜಖಂ ಮಾಡಿದ್ದು ಹಾಗೂ ತನಗೆ ಹಲ್ಲೆ ಮಾಡಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದ. ಬಿಜೆಪಿಗೆ ಏಕೆ ವೋಟ್ ಹಾಕಿದೆ ಎಂದು ಹಲ್ಲೆ ಮಾಡಿದ್ದಾಗಿ ಆತ ತಿಳಿಸಿದ್ದ. ಈ ವೇಳೆ ಆಟೋ ಜಖಂ ಆಗಿದೆ. ಅದಕ್ಕೆ ವಿಮೆ ಬರುತ್ತಾ ಎಂದು ಪ್ರಶ್ನಿಸಿದ ಕೆಎಸ್ ಈಶ್ವರಪ್ಪ ಆತನಿಗೆ ಸ್ವಲ್ಪ ಹಣ ಕೊಟ್ಟು ಇದನ್ನು ಇಟ್ಕೊ, ಆಟೋ ರೀಪೇರಿ ಮಾಡಿಸಿಕೋ ಎಂದಿದ್ದರು.

ಘಟನೆ ಬಗ್ಗೆ ಎಸ್‌ಪಿ ಮಿಥುನ್ ಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದ ಈಶ್ವರಪ್ಪ, ಈತನ ಬಗ್ಗೆ ವಿಚಾರಿಸಿ ಎಂದಾಗ ಎಸ್‌ಪಿಯವರು ತಮ್ಮ ಕಚೇರಿಗೆ ಆತನನ್ನು ಕಳುಹಿಸುವಂತೆ ತಿಳಿಸಿದ್ದರು. ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುವುದನ್ನು ಅರಿತ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಹೆಚ್‌ಸಿ ಯೋಗೀಶ್ ವಿನೋಬನಗರ ಠಾಣೆಗೆ ತೆರಳಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಆಟೋ ಚಾಲಕನಿಂದಲೂ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

ಈ ವೇಳೆ ಆಟೋ ಚಾಲಕ ನಾನು ಹಾಗೂ ಹಲ್ಲೆ ನಡೆಸಿದ ಅಬ್ರಾರ್, ನಸ್ರುಲ್ಲಾ ಮೂವರು ಸ್ನೇಹಿತರು. ನಾನು ಬಾರೊಂದರಲ್ಲಿ ಮದ್ಯ ಸೇವಿಸಿ ಹೊರ ಬಂದೆ. ನಾನು ಆಟೋ ರಿವರ್ಸ್ ತೆಗೆಯುವಾಗ ನನ್ನ ಆಟೋ ಆತನ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಹಾನಿಯಾಯಿತು. ಹೀಗಾಗಿ ಆತ ತನ್ನ ಮೇಲೆ ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ ಎಂದಿದ್ದಾನೆ.

ಒಟ್ಟಿನಲ್ಲಿ ಕೋಮು ಸಂಘರ್ಷಕ್ಕೆ ತಿರುಗುತ್ತಿದ್ದ ಘಟನೆ ಪೊಲೀಸರ ಸಂಧಾನದಿಂದ ಶಾಂತಿ ರೂಪ ಪಡೆದುಕೊಂಡಿದೆ. ಆಟೋ ಚಾಲಕ ಹರೀಶ್‌ನ ದ್ವಂದ್ವ ಹೇಳಿಕೆಗಳು ಘಟನೆಯ ನಿಜ ಸ್ವರೂಪವನ್ನೇ ಬದಲಿಸಿಬಿಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಅನ್ವಯ: ಪರಮೇಶ್ವರ್‌

Share This Article