3ನೇ ಮದುವೆಯಾಗಲು 2ನೇ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಕೊಂದ ಪತಿ ಕೊನೆಗೂ ಸಿಕ್ಕಿಬಿದ್ದ!

Public TV
2 Min Read

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ವಡ್ಡರಹಳ್ಳಿ ಜಾಕ್ವೆಲ್ ಬಳಿ ನಡೆದ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 2ನೇ ಮದುವೆಯಾಗಲು ಪತಿಯೇ ಪತ್ನಿಯನ್ನು ಪ್ಲಾನ್ ಮಾಡಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೆ.24ರಂದು ಚನ್ನರಾಯಪಟ್ಟಣದ ನಿಂಬಿಹಳ್ಳಿ ಗ್ರಾಮದ ಬಳಿ ಸುಮಾ ಹಾಗೂ ಪತಿ ಶಿವಣ್ಣ ದಂಪತಿ ಮಗುವಿನೊಂದಿಗೆ ತೆರಳುತ್ತಿದ್ದ ವೇಳೆ ಆಕಸ್ಮಾತ್ ಆಗಿ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಪ್ರಕರಣದ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಶಿವಣ್ಣ ಪತ್ನಿ ಸುಮಾರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ನಡೆದಿದ್ದು ಏನು?
ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಪತಿ ಶಿವಣ್ಣ ಹಾಗೂ ಸುಮಾ ನಡುವೆ ಜಗಳ ಆದ ಕುರಿತು ಮಾಹಿತಿ ಲಭಿಸಿದ್ದು, ಈ ಕುರಿತು ಅನುಮಾನಗೊಂಡು ಪತಿ ಶಿವಣ್ಣನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಸತ್ಯಾಂಶ ಹೊರ ಬಂದಿದೆ.

ತುಮಕೂರು ಜಿಲ್ಲೆಯ ಶಿರಾ ಮೂಲದ ಶಿವಣ್ಣ ಬೆಂಗಳೂರಿನಲ್ಲಿರುವ ಪ್ರಸಿದ್ಧ ಆಟೊಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಮೊದಲೇ ಮದುವೆಯಾಗಿದ್ದು, ಆಕೆಯನ್ನು ಬಿಟ್ಟು ಚನ್ನರಾಯಪಟ್ಟಣ ತಾಲೂಕು ನಿಂಬೇಹಳ್ಳಿ ಗ್ರಾಮದ ವಿಧವೆ ಸುಮಾಳನ್ನು ಮದುವೆಯಾಗಿದ್ದ.

ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸವಾಗಿದ್ದರು. ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕರುಣಿಸಿದ್ದ ಶಿವಣ್ಣ ಒಂದು ಹೆಣ್ಣು ಮಗುವನ್ನು ಕೊಟ್ಟಿದ್ದ. ಆದರೆ ಪತ್ನಿ ಮೇಲೆ ಅನುಮಾನ ಹೊಂದಿದ್ದ ಶಿವಣ್ಣ, ಪರಪುರುಷರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಮನೆಯಲ್ಲಿ ಜಗಳ ಆರಂಭಿಸಿದ್ದ. ಅಲ್ಲದೇ ಸುಮಾ ಕೂಡ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ನಂಟು ಬೆಳೆಸಿಕೊಂಡಿದ್ದಾನೆ ಅನುಮಾನಿಸಿದ್ದಳು.

ಇದೇ ಕಾರಣ ಶಿವಣ್ಣ ಹಾಗೂ ಸುಮಾ ನಡುವೆ ಹಲವು ಬಾರಿ ಜಗಳಕ್ಕೆ ಕಾರಣವಾಗಿತ್ತು. ಒಮ್ಮೆ ನೀನು ಹೀಗೆ ಜಗಳ ಮಾಡುತ್ತಿದ್ದರೆ ನಿನಗೆ ಒಂದು ಗತಿ ಕಾಣಿಸುವೆ ಎಂದು ಪತ್ನಿ ಸುಮಾ ಗಂಡನಿಗೆ ಧಮ್ಕಿ ಹಾಕಿದ್ದಳು. ಬಳಿಕ ಪತ್ನಿಯ ಮೇಲೆ ಮತ್ತಷ್ಟು ಅನುಮಾನಗೊಂಡ ಶಿವಣ್ಣ ಈಕೆಯನ್ನು ಸುಮ್ಮನೇ ಬಿಟ್ಟರೆ ನನಗೆ ಸ್ಕೆಚ್ ಹಾಕುತ್ತಾಳೆ ಎಂದು ಭಾವಿಸಿ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಿದ್ದಾನೆ.

ಊರಿಗೆ ಹಬ್ಬಕ್ಕೆ ಹೋಗಿ ಬರೋಣ ಎಂದು ಪತ್ನಿಯನ್ನು ಕರೆದು ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಪತ್ನಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಸುಮಾಳನ್ನು ಎಲ್ಲಿ ಕೊಲೆ ಮಾಡಬೇಕು ಎಂದು ಮೊದಲೇ ಪ್ಲಾನ ಮಾಡಿದ್ದ ಶಿವಣ್ಣ 3ನೇ ಮದುವೆ ಮಾಡಿಕೊಳ್ಳಲು ಇಚ್ಚಿಸಿದ್ದ ಭಾರತಿ ಎಂಬಾಕೆಯೊಂದಿಗೆ ಚರ್ಚೆ ಮಾಡಿದ್ದ. ಮೊದಲೇ ಮಾಡಿದ ಪ್ಲಾನ್ ಪ್ರಕಾರ ಸೆ.23 ರಂದು ಪತ್ನಿ ಹಾಗೂ ಮಗಳ ಜೊತೆ ಬೈಕ್ ನಲ್ಲಿ ಹೇಮಾವತಿ ನಾಲೆ ಏರಿ ಮೇಲೆ ತೆರಳಿ ಕೊಲೆ ಮಾಡಿದ್ದ. ಬಳಿಕ ಈ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. ಅಲ್ಲದೇ ಮಗು ಹಾಗೂ ನನ್ನನ್ನು ಭಾರತಿ ಹಾಗೂ ಆಕೆಯ ಅಳಿಯ ಕೃಷ್ಣ ಅಲಿಯಾಸ್ ಪುಟ್ಟರಾಜು ಎಂಬುವರು ಸಹಾಯ ಮಾಡಿ ನೀರಿನಿಂದ ರಕ್ಷಿಸಿದ್ದರು ಎಂದು ಹೇಳಿದ್ದ.

ಪೊಲೀಸ್ ವಿಚಾರಣೆ ಬಳಿಕ ಪತ್ನಿಯನ್ನು ತಾನೇ ಕೊಂದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕಳೆದೆರಡು ವರ್ಷಗಳಿಂದ ಭಾರತಿಯೊಂದಿಗೆ ತನಗೆ ಅಕ್ರಮ ಸಂಬಂಧವಿದ್ದು, ಆಕೆಯನ್ನು ಮದುವೆಯಾಗಲು ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಕೊಲೆಯಲ್ಲಿ ಪ್ರಿಯಕರಿಗೆ ಸಹಾಯ ಮಾಡಿದ ಶಿವಣ್ಣ ಜೊತೆ ಭಾರತಿಯೂ ಜೈಲು ಪಾಲಾಗಿದ್ದಾಳೆ. ಆದರೆ ತಂದೆ ತಾಯಿಯ ತಪ್ಪಿಗೆ ದಂಪತಿಯ ಮಗು ಮಾತ್ರ ಅನಾಥವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *