– ಎಲ್ಲಾ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದ (Shivaprakash Murder Case) ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಕೊಲೆಯಾದ ಬಿಕ್ಲು ಶಿವನ ತಾಯಿ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ.
ಬಿಕ್ಲುಶಿವ ಬರ್ಬರ ಹತ್ಯೆಯ ವಿಡಿಯೋ ವೈರಲ್ ಆಗಿದೆ. ಹಲ್ಲೆ ವೇಳೆ ಕೆಲ ಆರೋಪಿಗಳು ಹೆಲ್ಮೆಟ್ ಧರಿಸಿದ್ದಾರೆ. ಕೆಳಗೆ ಬಿದ್ದು ನನ್ನನ್ನು ಬಿಟ್ಟು ಬಿಡಿ ಅಂತ ಗೋಗರೆದರೂ ಬಿಡದ ಆರೋಪಿಗಳು ಮನಸೋ ಇಚ್ಚೇ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿಕ್ಲು ಶಿವನ ಕೊಲೆಯಲ್ಲಿ 8 ಮಂದಿ ಭಾಗಿ ಆಗಿರುವ ಶಂಕೆ ಇದೆ.
ಬೆಳಗ್ಗೆ ಮಹಾಭದ್ರಕಾಳಿ ಮಹಾಯಾಗದಲ್ಲಿ ಭಾಗಿ
ಬಿಕ್ಲು ಶಿವ ಕೊಲೆ ಪ್ರಕರಣದ ಮತ್ತೊಂದು ವಿಚಾರ ಬಹಿರಂಗವಾಗಿದೆ. ಮಂಗಳವಾರ ಬೆಳಗ್ಗೆ ಮಹದೇವಪುರದಲ್ಲಿ ನಡೆದ ಮಹಾಭದ್ರಕಾಳಿ ಯಾಗದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಭಾಗಿ ಆಗಿದ್ರು. ಅಂದೇ ರಾತ್ರಿ ಕೊಲೆ ಕೇಸ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕೊಲೆ ಪ್ರಕರಣದಲ್ಲಿ ಎ5 ಆಗಿರುವ ಶಾಸಕ ಬೈರತಿ ಬಸವರಾಜ್ ಪ್ರಕರಣಕ್ಕೂ. ಆರೋಪಿಗಳು. ಮೃತನಿಗೂ ನನಗೂ ಸಂಬಂಧವಿಲ್ಲ ಅಂತಿದ್ದಾರೆ. ಕೊಲೆ ಆರೋಪಿ ಜೊತೆಯೇ ಬೈರತಿ ಇರುವ ವಿಡಿಯೋ ಫೋಟೋಗಳು ಲಭ್ಯವಾಗಿದೆ.
ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್ ನೋಟಿಸ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಕೇಸ್ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಭಾರತಿ ನಗರ ಪೊಲೀಸರು ನೋಟಿಸ್ ಕೊಟಿದ್ದಾರೆ. ನೋಟಿಸ್ ತಲುಪಿದ ಕೂಡಲೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ನೋಟಿಸ್‌ನಿಂದ ಸದ್ಯ ಬೈರತಿ ಬಸವರಾಜು ಬಂಧನ ಭೀತಿ ಎದುರಿಸುತ್ತಿದ್ದಾರೆ.
ಪ್ರಕರಣದ ಬಗ್ಗೆ ಕೊಲೆಯಾದ ರೌಡಿಶೀಟರ್ ಶಿವಪ್ರಕಾಶ್ @ ಬಿಕ್ಲು ಶಿವ ತಾಯಿ ವಿಜಯ್ ಲಕ್ಷ್ಮೀ ಮಾತನಾಡಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ. ಮಕ್ಕಳನ್ನ ಹೊರಗೆ ಕಳಿಸಬೇಡಿ, ನೀವು ಸಹ ಹೊರಗೆ ಹೋಗಬೇಡಿ.. ಯಾರೇ ಬಂದು ಬಾಗಿಲು ತಟ್ಟಿದ್ರು ತೆಗೆಯಬೇಡಿ ಅಂತ ಶಿವ ಹೇಳಿದ್ದ. ತನಿಖೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಪೊಲೀಸರಿಗೆ ಕಂಪ್ಲೆಂಟ್ ಕೊಟಿದ್ದೇನೆ. ನನ್ನ ಮಗನ ಮೊಬೈಲ್‌ನಲ್ಲಿ ಎಲ್ಲ ಮಾಹಿತಿ ಇದೆ ಎಂದಿದ್ದಾರೆ. ಅಲ್ಲದೇ ಬಿಕ್ಲು ಶಿವ ಹಾಗೂ ಜಗ್ಗ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು. ಶಿವನಿಗೆ ತನ್ನ ಕೊಲೆ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು. ನನ್ನ ಹತ್ಯೆಗೆ ಚೆನ್ನೈ ಹುಡುಗರಿಗೆ ಸುಪಾರಿ ಕೊಟ್ಟಿದ್ದಾರೆ ಅಂತ ಹೇಳ್ತಿದ್ದ ಎಂದಿದ್ದಾರೆ.
ನಿನ್ನೆಯಷ್ಟೇ ಬೈರತಿ ಬಸವರಾಜ್ ಕುಮ್ಮಕ್ಕಿನಿಂದಲೇ ಮಗನ ಹತ್ಯೆ ಆಗಿದೆ ಎಂದಿದ್ದ ಮೃತನ ತಾಯಿ ವಿಜಯಲಕ್ಷ್ಮಿ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ. ಪೊಲೀಸರು ಹೆಸರು ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಜ್ಞಾಪಕವೇ ಇಲ್ಲ. ನನ್ನ ಮಗ ನೀಡಿರೋ ದೂರಿನ ಆಧಾರದ ಮೇಲೆ ಹೆಸರು ಹಾಕಿಕೊಂಡಿದ್ದಾರೆ ಅಂತ ಬಿಕ್ಲು ಶಿವ ತಾಯಿ ವಿಜಯ ಲಕ್ಷ್ಮಿ ಹೇಳಿದ್ದಾರೆ.
ಎಲ್ಲಾ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಇನ್ನೂ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 29ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಬೆಳಗ್ಗೆ 7 ರಿಂದ 9 ಗಂಟೆ ತನಕ ಆರೋಪಿಗಳ ಕುಟುಂಬ ಭೇಟಿಗೆ ಅವಕಾಶ ನೀಡಬೇಕೆಂದು ತಿಳಿಸಿದೆ.