ಮಂಡ್ಯ: ಶ್ರೀರಂಗಪಟ್ಟಣದ ಡಿವೈಎಸ್ಪಿ ಯೋಗೇಂದ್ರನಾಥ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ, ನಾನು ಚೆನ್ನಾಗಿಯೇ ಇದ್ದೇನೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಪ್ರಕರಣವನ್ನು ಬೇರೆ ರೀತಿ ತಿರುಗಿಸಿದ್ದಾರೆ ಎಂದು ಯೋಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮೈಸೂರಿನ ನಾರಾಯಣ ಹೃದಯಾಲಯದಿಂದ ಸ್ಪಷ್ಟನೆ ನೀಡಿರುವ ಅವರು, ನಾನು ಬೆಳಗ್ಗೆ ಟಾಯ್ಲೆಟ್‍ಗೆ ಹೋಗಿದ್ದಾಗ ತಲೆಸುತ್ತು ಬಂದಿತ್ತು. ಈ ವೇಳೆ ಕಮೋಡ್ ಗ್ಲಾಸ್ ಒಡೆದು ಕಾಲಿಗೆ ಮತ್ತು ಕೈಗೆ ಪೆಟ್ಟಾಗಿದೆ. ನಾನು ಚೆನ್ನಾಗಿಯೇ ಇದ್ದೇನೆ, ಯಾವುದೇ ಊಹಾಪೋಹಕ್ಕೆ ಕಿವಿಗೊಡಬೇಡಿ. ನನಗೆ ಬಿಪಿ ಮತ್ತು ಸಕ್ಕರೆ ಖಾಯಿಲೆ ಇರುವ ಕಾರಣ ಮರೆಗುಳಿ ಇದೆ. ಹೀಗಾಗಿ ತಲೆ ಸುತ್ತು ಬರುತ್ತದೆ ಎಂದು ವಿವರಿಸಿದರು.
ನಾನು ಈಗಲೂ ಚೆನ್ನಾಗಿಯೇ ಇದ್ದೇನೆ. ಸ್ವಲ್ಪ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಯಾರೂ ಯಾವುದೇ ಉದ್ವೇಗಕ್ಕೆ ಒಳಗಾಗದೇ ಅನುಮಾನಕ್ಕೆ ಕಿವಿಗೊಡಬೇಡಿ ಎಂದು ಇದೇ ವೇಳೆ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ತಿಳಿಸಿದರು.
ಎಸ್ಪಿ ಕೆ.ಪರಶುರಾಮ್ ಸಹ ಸ್ಪಷ್ಟಪಡಿಸಿದ್ದು, ಭಾನುವಾರ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಇತ್ತು. ತಲೆ ಸುತ್ತು ಬಂದು ಬಿದ್ದಿದ್ದ ಅವರನ್ನು ಅವರ ಸಂಬಂಧಿಕರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಅವರು ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿಲ್ಲ, ಬಿದ್ದಾಗ ಕಮೋಡ್ ತಗಲಿ ಗಾಯವಾಗಿದೆ ಎಂದು ಹೇಳಿದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ದಸರಾಗೂ ಮೊದಲು ಅವರು 5 ದಿನ ರಜೆ ಪಡೆದುಕೊಂಡಿದ್ದರು. ಎಲ್ಲ ಸಿಬ್ಬಂದಿಗೆ ಇರುವಂತೆ ಕೆಲಸದ ಒತ್ತಡ ಸಾಮಾನ್ಯವಾಗಿಯೇ ಇತ್ತು. ಮತ್ತೆ 15 ರಜೆ ಕೇಳಿ ಗುರುವಾರ ರಜೆ ಕೇಳಿದ್ದರು. ಆದರೆ ನಾನು ಶುಕ್ರವಾರ ಅವರಿಗೆ ರಜೆ ಮಂಜೂರು ಮಾಡಿದ್ದೆ. ರಜೆ ಮಂಜೂರಾದರೂ ಅವರು ಬೆಂಗಳೂರಿಗೆ ಹೋಗದೇ ಇಲ್ಲೆ ಯಾಕೆ ಉಳಿದರು ಎನ್ನುವುದು ಗೊತ್ತಿಲ್ಲ. ಡಿವೈಎಸ್ಪಿ ಸಂಪೂರ್ಣ ಚೇತರಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೈ, ಕಾಲಿನ ನರ ಕೊಯ್ದುಕೊಂಡು ಜಿಲ್ಲೆಯ ಶ್ರೀರಂಗಪಟ್ಟಣದ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ನಿನ್ನೆ ಹೇಳಲಾಗಿತ್ತು. ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲಿನ ನಿವಾಸದಲ್ಲಿ ಈ ಘಟನೆ ನಡೆದಿತ್ತು. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ನೋಡಿದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಯೋಗೇಂದ್ರನಾಥ ಅವರನ್ನು ದಾಖಲಿಸಲಾಗಿತ್ತು.