ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌

Public TV
3 Min Read

– ನಾಲಾಯಕ್ ರಾಹುಲ್‌ಗೆ ಮಲ್ಲಿಕಾರ್ಜುನ ಖರ್ಗೆ ಸಲಾಮು ಹೊಡೆಯುವ ದುಸ್ಥಿತಿ ಬರಬಾರದಿತ್ತು: ಅಶೋಕ್‌
– ಪೋಕ್ಸೋ ಆರೋಪಿ ಕಾಲಿಗೆ ಬಿದ್ದು ಅಸ್ತಿತ್ವ ಉಳಿಸಿಕೊಳ್ಳೋ ದಯನೀಯ ಸ್ಥಿತಿ ನಿಮ್ಮದು: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಅಶೋಕ್ ಅವರ ಹೆಸರು ಸೇರಿಸದ ವಿವಾದ ಈಗ ವಿಪಕ್ಞ ನಾಯಕ ಆರ್‌.ಅಶೋಕ್‌ (R. Ashoka) ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರ ನಡುವಿನ ವೈಯಕ್ತಿಕ ಜಟಾಪಟಿಗೆ ಕಾರಣವಾಗಿದೆ. ಶಾಸಕ-ಸಚಿವರಿಬ್ಬರೂ ಟ್ವೀಟ್‌ ಮೂಲಕವೇ ವಾಕ್ಸಮರ ನಡೆಸಿದ್ದಾರೆ.

ಮೊದಲು ಆಹ್ವಾನ ಕೊಡದಿದ್ದು.. ಕುರ್ಚಿ ಕಿತ್ತುಕೊಳ್ಳೋ ಸಂದೇಶ ಅಂತ ಭಾವಿಸಬಹುದೇ ಅಂತ ಖರ್ಗೆ ಕಾಲೆಳೆದಿದ್ದರು. ಇದಕ್ಕೆ ರಿಪಬ್ಲಿಕ್ ಆಫ್ ಕಲಬುರ್ಗಿ ಮಾಡಿಕೊಳ್ಳದೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕಡೆ ಗಮನ ಕೊಟ್ಟಿದ್ರೆ, ಕಲ್ಯಾಣ ಕರ್ನಾಟಕ ಹಿಂದುಳಿಯುತ್ತಿರಲಿಲ್ಲ ಅಂತ ವಿಪಕ್ಷ ನಾಯಕ ಅಶೋಕ್ ಟಕ್ಕರ್ ಕೊಟ್ಟಿದ್ದರು.

ನಂತರ ಮತ್ತೆ ಪ್ರಿಯಾಂಕ್ ಖರ್ಗೆ ಮತ್ತೊಂದು ಪೋಸ್ಟ್ ಹಾಕಿ, ನಾನು ಜನರ ಗಮನಕ್ಕೆ ತಂದಿದ್ದರಿಂದಲೇ ನಿಮಗೆ ವೇದಿಕೆ ಆಹ್ವಾನ ಬಂತು. ಇದು ನಿಮಗೆ ನಿಮ್ಮ ಹೈಕಮಾಂಡ್ ಹಾಕಿದ ಭಿಕ್ಷೆ ಅಂತ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದರು. ಇದಕ್ಕೆ ಅಶೋಕ್‌, ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನ ತಪ್ಪಿದ ವಿಚಾರ ಪ್ರಸ್ತಾಪಿ ಕೌಂಟರ್‌ ಕೊಟ್ಟಿದ್ದರು.

ನಾಲಾಯಕ್ ರಾಹುಲ್ ಗಾಂಧಿಗೆ ಮಲ್ಲಿಕಾರ್ಜುನ ಖರ್ಗೆ ಸಲಾಮು ಹೊಡೆಯುವ ದುಸ್ಥಿತಿ ಬರಬಾರದಿತ್ತು. ರಾಹುಲ್, ಪ್ರಿಯಾಂಕಾ ಅಂತ ಗಾಂಧಿ ಕುಟುಂಬದ ಹೆಸರಿಟ್ಕೊಂಡು ಗುಲಾಮಗಿರಿ ಮಾಡ್ತಿದೀರಿ ಅಂತ ಅಶೋಕ್‌ ತಿವಿದಿದ್ದರು.

ಇದಕ್ಕೆ ಪ್ರಿಯಾಂಕ್ ಖರ್ಗೆ, ಪೋಕ್ಸೋ ಆರೋಪಿ ಕಾಲಿಗೆ ಬಿದ್ದು ಅಸ್ತಿತ್ವ ಉಳಿಸಿಕೊಳ್ಳೋ ದಯನೀಯ ಸ್ಥಿತಿ ನಿಮ್ಮದು. ಪ್ರಿಯದರ್ಶಿನಿ, ರಾಹುಲ್, ಪ್ರಿಯಾಂಕ್ ಅನ್ನೋದು ಬೌದ್ಧ ಧರ್ಮದ ಹೆಸರುಗಳು, ಬೌದ್ಧ ಧರ್ಮದ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲ ತಿರುಗೇಟು ನೀಡಿದ್ದರು.

ವಿವಾದ ಏಕೆ?
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಅಶೋಕ್ ಅವರ ಹೆಸರು ಸೇರಿಸದೆ ವಿವಾದವಾಗಿತ್ತು. ಐಐಟಿ ಸಭಾಂಗಣದಲ್ಲಿ ಮೆಟ್ರೋ ಹಳದಿ ಮಾರ್ಗ, ಫೇಸ್-3 ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ರಿಗೆ ಆಹ್ವಾನ ಕೊಟ್ಟಿರಲಿಲ್ಲ. ಸರ್ಕಾರದಿಂದ ಪ್ರಧಾನಿ ಸಚಿವಾಲಯಕ್ಕೆ ಕಳಿಸಿದ್ದ ಪಟ್ಟಿಯಲ್ಲೇ ಅಶೋಕ್ ಹೆಸರು ಇರಲಿಲ್ಲ. ಇದು ಪ್ರೋಟೋಕಾಲ್ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿತ್ತು. ವಿವಾದದ ಬಳಿಕ ಎಚ್ಚೆತ್ತ ಸರ್ಕಾರ ಲೋಪ ಸರಿಪಡಿಸಿ ಆರ್ ಅಶೋಕ್ ಮತ್ತು ಸಂಸದ ಮಂಜುನಾಥ್ ಹೆಸರು ಸೇರಿಸಿತು. ಈ ಬಗ್ಗೆಯೂ ಅಶೋಕ್‌ಗೆ ಸಚಿವ ಪ್ರಿಯಾಂಕ್ ಖರ್ಗೆ `ಎಕ್ಸ್’ನಲ್ಲಿ ಕಾಲೆಳೆದಿದ್ದರು.

Share This Article