– ಈಳಂ ತಮಿಳಿಗರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಕರೆ
ಚೆನ್ನೈ: ಶ್ರೀಲಂಕಾದ ತಮಿಳರ ಸಮಸ್ಯೆ ಬಗ್ಗೆ ಮಾತನಾಡುವ ವೇಳೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ವಿಜಯ್ ವಿವಾದಿತ ಹೇಳಿಕೆಯೊಂದನ್ನ ನೀಡಿದ್ದಾರೆ. ಮಾತನಾಡುವ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆಯ ಹಿಂದಿನ ಸೂತ್ರಧಾರಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ವೇಲುಪಿಳ್ಳೈ ಪ್ರಭಾಕರನ್‌ನನ್ನು (Velupillai Prabhakaran) ಹೊಗಳಿದ್ದಾರೆ.
2026ರ ವಿಧಾನಸಭಾ ಚುನಾವಣೆಗಾಗಿ ವಿಜಯ್ (Thalapathy Vijay) ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದ ಸಮಾವೇಶದಲ್ಲಿ ಶ್ರೀಲಂಕಾದ ತಮಿಳರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವೇಲುಪಿಳ್ಳೈ ಪ್ರಭಾಕರನ್ ʻಈಳಂʼ ತಮಿಳರ ಸಮುದಾಯಕ್ಕೆ ತಾಯಿಯಂತೆ. ಹಾಗಾಗಿ ಲಂಕಾ ತಮಿಳರ ಸಮಸ್ಯೆ ತಮಿಳುನಾಡಿನಲ್ಲಿ ಅದ್ರಲ್ಲೂ ನಾಗಪಟ್ಟಣಂನಂತಹ ಪ್ರದೇಶಗಳ ಮೀನುಗಾರರಲ್ಲಿ ಭಾವನಾತ್ಮಕವಾಗಿದೆ ಎಂದಿದ್ದಾರೆ. ʻಈಳಂʼ ಎನ್ನುವುದು ಶ್ರೀಲಂಕಾದ ಆ ಪ್ರದೇಶವನ್ನು ಸೂಚಿಸುವ ಹೆಸರು.
ಅಲ್ಲದೇ, ಶ್ರೀಲಂಕಾ ಹಾಗೂ ವಿಶ್ವದ ವಿವಿಧೆಡೆ ಇರುವ ನಮ್ಮ ಈಳಂ ತಮಿಳರು ಇಂದು ಮಾತೃ ವಾತ್ಸಲ್ಯ ತೋರಿಸಿದ ನಾಯಕನನ್ನ ಕಳೆದುಕೊಂಡು ಬಳಲುತ್ತಿದ್ದಾರೆ. ಅವರಿಗಾಗಿ ನಾವಿಂದು ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಕರೆ ನೀಡಿದ್ದಾರೆ.
1990ರ ದಶಕದಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟ ಎಲ್‌ಟಿಟಿಇ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಶಸ್ತ್ರ ಪಡೆಯಾಗಿತ್ತು. ಆದ್ರೆ 2009ರಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸುವವರೆಗೂ ಅದು ದಶಕಗಳ ಕಾಲ ಸ್ವತಂತ್ರ ತಮಿಳು ರಾಜ್ಯ ಸ್ಥಾಪಿಸಲು ಹೋರಾಡಿತ್ತು. ಅದೇ ವರ್ಷ ವೇಲುಪಿಳ್ಳೈ ಪ್ರಭಾಕರನ್ ರನ್ನ ಶ್ರೀಲಂಕಾ ಸೇನೆ ಕೊಂದಿತು.
ರಾಜೀವ್ ಗಾಂಧಿ ಹತ್ಯೆ ಹಿಂದಿನ ಮಾಸ್ಟರ್?
1991 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಹಿಂದೆ ಎಲ್‌ಟಿಟಿಇ ಇದೆ ಎಂದು ಆರೋಪಿಸಲಾಗಿದೆ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಎಲ್‌ಟಿಟಿಇ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರಭಾಕರನ್ ಆದೇಶಿಸಿದ್ದಾರೆ ಎಂದು ಹೇಳಲಾಗಿತ್ತು. ಇನ್ನು, 2011ರ ಸಂದರ್ಶನವೊಂದರಲ್ಲಿ, ಎಲ್‌ಟಿಟಿಇಯ ಖಜಾಂಚಿ ಮತ್ತು ಅದರ ಮುಖ್ಯ ಶಸ್ತ್ರಾಸ್ತ್ರ ಸಂಪಾದನೆದಾರರಾಗಿದ್ದ ಕುಮಾರನ್ ಪತ್ಮನಾಥನ್ ಅವರು ರಾಜೀವ್ ಗಾಂಧಿಯನ್ನು ಹತ್ಯೆಗೈದ ವೇಲುಪಿಳ್ಳೈ ಪ್ರಭಾಕರನ್ ಅವರ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ್ದರು.
2009ರಲ್ಲಿಯೇ ಪ್ರಭಾಕರನ್ ಹತ್ಯೆ; ಶ್ರೀಲಂಕಾ
ಶ್ರೀಲಂಕಾ ಸರ್ಕಾರ ಮೇ 2009ರಲ್ಲಿಯೇ ಪ್ರಭಾಕರನ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಅದಲ್ಲದೇ ಪ್ರಭಾಕರನ್ ಹಾಗೂ ಅವರ ಮಗನ ಡಿಎನ್‌ಎ ಹೊಂದಾಣಿಕೆಯಾಗಿತ್ತು ಎಂದು ಶ್ರೀಲಂಕಾ ಸೇನೆ ಹೇಳಿಕೆ ನೀಡಿತ್ತು. ಮುಲ್ಲೈತೀವು ಪ್ರದೇಶದ ನಾಂತಿಕಡಲ್ ತೀರದಲ್ಲಿ ಎಲ್‌ಟಿಟಿಇ ಮುಖ್ಯಸ್ಥನ ಶವ ಪತ್ತೆಯಾಗಿತ್ತು ಎಂದು ವರದಿಗಳು ಹೇಳಿದ್ದವು. ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ದೇಹವನ್ನು ಆತನ ಇಬ್ಬರು ಮಾಜಿ ಸಹಚರರು ಗುರುತಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಆದ್ರೆ ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಇನ್ನೂ 2023ರಲ್ಲಿ ಆತ ಜೀವಂತವಾಗಿದ್ದು, ಅವರ ಕುಟುಂಬದ ಜೊತೆ ಜೀವಿಸುತ್ತಿದ್ದಾನೆ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಪಜಾ ನೆಡುಮಾರನ್ ಹೇಳಿದ್ದರು. ಆದ್ರೆ ಆತ ಜೀವಂತವಾಗಿರುವ ಸುಳಿವು ಎಲ್ಲಿಯೂ ಸಿಕ್ಕಿರಲಿಲ್ಲ.
ಇನ್ನೂ ವಿಜಯ್ ಲಂಕಾದ ತಮಿಳರಿಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲೇನಲ್ಲ. 2008ರಲ್ಲೂ ಸಮುದಾಯದ ಸದಸ್ಯರನ್ನ ಹತ್ಯೆ ಖಂಡಿಸಿ ಚೆನ್ನೈನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.