ಮಂತ್ರಾಲಯದಲ್ಲಿ ತುಂಗಾರತಿ ಸಂಭ್ರಮ – ರಾಯರ ಮಠದಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ

Public TV
1 Min Read

ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ಕಾರ್ತಿಕ ಶುದ್ಧ ಪೌರ್ಣಮಿ ಹಿನ್ನೆಲೆ ಪುಣ್ಯನದಿ ತುಂಗಭದ್ರೆಗೆ ಆರತಿ ಬೆಳಗುವ ಮೂಲಕ ತುಂಗಾರತಿ ಕಾರ್ಯಕ್ರಮ ಹಾಗೂ ಮಠದ ಪ್ರಾಕಾರದಲ್ಲಿ ಲಕ್ಷದೀಪೋತ್ಸವ ಶುಕ್ರವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತುಂಗಾರತಿ ಕಾರ್ಯಕ್ರಮದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳು ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ಇದಕ್ಕೂ ಮೊದಲು ಉತ್ಸವ ಮೂರ್ತಿ ಪ್ರಹ್ಲಾದರಾಜರನ್ನು ಶ್ರೀಮಠದಿಂದ ತುಂಗಭದ್ರಾ ನದಿ ತೀರಕ್ಕೆ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು. ಶ್ರೀಗಳು ತುಂಗಭದ್ರಾ ನದಿಗೆ ವಿಶೇಷ ಪೂಜೆ ಆರತಿ ನೆರವೇರಿಸಿದರು.

ದೀಪಗಳನ್ನ ನದಿಯಲ್ಲಿ ತೇಲಿಬಿಡಲಾಯಿತು. ತುಂಗಾರತಿ ಮುಗಿದ ನಂತರ ಶ್ರೀ ಮಠದ ಪ್ರಾಕಾರದಲ್ಲಿ ಜ್ವಾಲಾ ತೋರಣ ನೆರವೇರಿಸಲಾಯಿತು. ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೀಪೋತ್ಸವ ಕಣ್ತುಂಬಿಕೊಂಡರು.

Share This Article