ಟಿಬಿ ಡ್ಯಾಂ| ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ – ಯಾವುದೇ ವಿಘ್ನ ಬಾರದಿರಲು ಮಹಾ ಸುದರ್ಶನ, ರಕ್ಷಾ ಹೋಮ

1 Min Read

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ (Crest Gate) ಅಳವಡಿಕೆ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಗೇಟ್ ಅಳವಡಿಕೆಗೆ ಯಾವುದೇ ವಿಘ್ನಗಳು ಎದುರಾಗದಂತೆ ಸುಗಮವಾಗಿ ಸಾಗಲಿ ಎಂದು ಇಂದು ಹೋಮ, ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ ಟಿಬಿ ಬೋರ್ಡ್ ಅಧಿಕಾರಿಗಳು, ವಿಜಯನಗರ ಡಿಸಿ, ಸಿಇಓ, ರೈತರ ಸಮ್ಮುಖದಲ್ಲಿ ಡ್ಯಾಂಗೆ ಯಾವುದೇ ತೊಂದರೆಯಾಗದಂತೆ ಗೇಟ್ ಅಳವಡಿಕೆಯಾಗಲಿ ಎಂದು ಗುರುರಾಜ ಆಚಾರ್ಯ, ವಾದಿರಾಜ ಆಚಾರ್ಯರರ ನೇತೃತ್ವದಲ್ಲಿ ಮಹಾ ಸುದರ್ಶನ ಹೋಮ ಮತ್ತು ರಕ್ಷಾ ಹೋಮದ ವಿಶೇಷ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಲಾಯಿತು. ಇದನ್ನೂ ಓದಿ: ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಹೆಚ್‌ಡಿಕೆ

ಪೂಜೆಯ ಬಳಿಕ ಆರಂಭದಲ್ಲಿ ಗ್ಯಾಸ್ ಕಟ್ಟರ್‌ ಮೂಲಕ ಕ್ರಸ್ಟ್ ಗೇಟ್ ಕಟ್ಟಿಂಗ್‌ ಮಾಡಿ ಮೇಲೆತ್ತಲು‌ ಚಾಲನೆ ನೀಡಲಾಯಿತು. ಕ್ರಸ್ಟ್ ಗೇಟ್ ತೆರವು ಮಾಡಿದ ನಂತರ ತಜ್ಞರ ಸೂಚನೆಯಂತೆ ಹೊಸ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ. 105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ‌ ಸದ್ಯಕ್ಕೆ 75 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಾಗಲೇ ಜಲಾಶಯದಲ್ಲಿನ ನೀರು 40 ಟಿಎಂಸಿ ಇಳಿಸಿ ಗೇಟ್ ಅಳವಡಿಸಲು ಟಿಬಿ ಬೋರ್ಡ್ ಅಧಿಕಾರಿಗಳು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೇಸಿಗೆ ಮುಕ್ತಾಯದ ವೇಳೆಗೆ ಎಲ್ಲ‌ ಗೇಟ್ ಅಳವಡಿಸ್ತೇವೆ ಅಂತಾ ಟಿಬಿ ಬೋರ್ಡ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ಬೇಸಿಗೆಯಲ್ಲಿ ಟಿಬಿ ಡ್ಯಾಂಗೆ ಕ್ರಸ್ಟ್‌ಗೇಟ್‌ ಅಳವಡಿಕೆ ನಡೆಯೋದು ಅನುಮಾನ!

ತುಂಗಭದ್ರಾ ಜಲಾಶಯದಿಂದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸೇರಿ 8 ಜಿಲ್ಲೆಗಳ 6 ಲಕ್ಷ ಎಕರೆ ಕೃಷಿ ಪ್ರದೇಶಲ್ಲಿ ಬೆಳೆ ಬೆಳೆಯಲು ಮತ್ತು ಕುಡಿಯುವ ನೀರು ಪೂರೈಕೆ ಮಾಡಲಗುತ್ತಿದೆ.  ಸದ್ಯ ಜಲಾಶಯಕ್ಕೆ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದರಿಂದ ಜಲಾನಯನ ಪ್ರದೇಶದ ರೈತರು ಫುಲ್ ಖುಷ್ ಆಗಿದ್ದಾರೆ.

Share This Article