ತುಮಕೂರು: ಕೊಡಗು, ಕರಾವಳಿ ಪ್ರದೇಶದಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದರೆ, ಇತ್ತ ತುಮಕೂರು ಜಿಲ್ಲೆಯಲ್ಲಿ ನಿಯಮಿತ ಮಳೆ ಬೀಳದೆ ಮತ್ತೆ ಬರ ಆವರಿಸುವ ಆತಂಕ ಜನರಲ್ಲಿ ಎದುರಾಗಿದೆ.
ಮಳೆಯನ್ನೇ ನಂಬಿ ರೈತರು ಈಗಾಗಲೇ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ಮಳೆ ಕೈಕೊಟ್ಟ ಕಾರಣದಿಂದ ಬಿತ್ತನೆ ಮಾಡಿದ್ದ ಬೆಳೆ ನೆಲಕಚ್ಚಿವೆ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರಾಗಿ, ಭತ್ತ, ಶೇಂಗಾ ಮಳೆ ಇಲ್ಲದೆ ಕಮರಿ ಹೋಗಿವೆ.
ಈಗಾಗಲೇ ಜಿಲ್ಲೆಯಲ್ಲಿ ಮುಂಗಾಯ ಕೈಕೊಟ್ಟಿದ್ದು, ಈ ವರ್ಷವಾದರು ಉತ್ತಮ ಬೆಳೆ ನಿರೀಕ್ಷೆ ಇದ್ದ ರೈತರು ನಿರಾಸೆ ಅನುಭವಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ತಮ್ಮ ಅಳಲು ತೊಡಿಕೊಂಡಿರುವ ರೈತರು, ಕಳೆದ ಬಾರಿಯೂ ಮಳೆ ಕೈಕೊಟ್ಟು ನಷ್ಟ ಅನುಭವಿಸಿದ್ದೆವು. ಈ ಬಾರಿಯೂ ಬರ ಪರಿಸ್ಥಿತಿ ಮುಂದುವರಿದಿದ್ದು, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾದರು ಕೂಡ ನಮ್ಮಲ್ಲಿ ಮೋಡಗಳು ಮಾತ್ರ ಕಾಣಿಸಿಕೊಳ್ಳುತ್ತಿದೆ. ಆದರೆ ಇದುವರೆಗೂ ಒಂದು ಹನಿ ಮಳೆ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬಹುತೇಕ ಸಣ್ಣ ಭೂ ಇಳುವರಿದಾರರೆ ಇರುವ ಕಾರಣ ಅಲ್ಪ ಸ್ವಲ್ಪ ಪ್ರದೇಶದಲ್ಲಿ ವೆಚ್ಚ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈ ಚೆಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. ಇನ್ನು ಮಳೆಯ ಕೊರತೆ ಕಾರಣದಿಂದ ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗಿದ್ದು, ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವೀಕರಿಸಿದ್ದ ರೈತ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ರೈತರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದು, ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಒಂದು ಭಾಗದಲ್ಲಿ ಭಾರೀ ಮಳೆಗೆ ಜನ ತತ್ತರಿಸಿ ಮನೆ, ಜಮೀನು ಕಳೆದು ಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ. ಆದರೆ ಜಿಲ್ಲೆಯ ರೈತರು ಮಾತ್ರ ತಲೆ ಮೇಲೆ ಕೈ ಇಟ್ಟು ಮಳೆಗಾಗಿ ಆಕಾಶದತ್ತ ಮುಖ ಮಾಡಿ ನಿಂತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಚಾಯೆ ಕಾಣಿಸಿಕೊಂಡಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ ಜಿಲ್ಲೆಗಳ ಹಲವು ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv