ಕಾರು ಅಪಘಾತಕ್ಕೀಡಾಗಿ ಯುವಕರಿಬ್ಬರು ದುರ್ಮರಣ- ಕುಟುಂಬಸ್ಥರಿಗೆ ಸಿ.ಟಿ ರವಿ ಸಾಂತ್ವನ

Public TV
2 Min Read

– ನನ್ನನ್ನೇ ನಿಮ್ಮ ಮಗ ಅಂದುಕೊಳ್ಳಿ ಅಂದ್ರು ಶಾಸಕ

ಮಂಡ್ಯ: ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಇಂದು ಶಾಸಕರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇಂದು ಬೆಳಗ್ಗೆ ಮಂಡ್ಯದ ಅಶೋಕನಗರದಲ್ಲಿರೊ ಎಎಸ್‍ಪಿ ಬಲರಾಮೇಗೌಡರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ರವಿ ಅವರಿಗೆ ಮಂಡ್ಯದ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ರು. ಅಲ್ಲದೆ ಇದೇ ವೇಳೆ ಮೃತರ ಪೋಷಕರು ಕೂಡ ಇದ್ದರು.

ಕಾರು ಅಪಘಾತದಲ್ಲಿ ಮೃತ ವ್ಯಕ್ತಿಯ ಪೋಷಕರೊಂದಿಗೆ ರಾಜಿ ಸಂಧಾನಕ್ಕೆ ರವಿ ಅವರು ಮುಂದಾದ್ರು. ಈ ವೇಳೆ ಮೃತ ಯುವಕರ ಪೋಷಕರು ಒಪ್ಪಲಿಲ್ಲ. ಅಲ್ಲದೆ ಕಬ್ಬಾಳಮ್ಮನಿಗೆ ಕರ್ಪೂರ ಹಚ್ಚಿ ಬಿಡ್ತಿವಿ ಬಿಡಿ ಎಂದು ಹೇಳಿ ಅಲ್ಲಿಂದ ಹೊರ ನಡೆದಿದ್ದರು. ಎರಡನೇ ಹಂತದ ರಾಜಿ ಸಂಧಾನ ಮಾತುಕತೆ ಮುಂದುವರಿದ ನಂತರ ಮೃತರಿಗೆ ಎರಡೂವರೆ ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಲಾಯಿತು.

ಮಾನವೀಯತೆಯ ಆಧಾರದಲ್ಲಿ ನೆರವು:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಪಘಾತದ ಸಂದರ್ಭದಲ್ಲಿ ಕಾರಲ್ಲಿದ್ದೆ ಅನ್ನೋ ಕಾರಣಕ್ಕೆ ಉತ್ತರ ಕೊಡಬೇಕಿದೆ. ಅಪಘಾತಕ್ಕೀಡಾಗಿರುವ ಕಾರು ನನ್ನದಲ್ಲ. ಅಂದು ಘಟನೆ ನಡೆದಾಗ ನಾನು ಕಾರಲ್ಲಿ ನಿದ್ರೆ ಮಾಡುತ್ತಿದ್ದೆ. ಹಾಗಾಗಿ ಘಟನೆಗೆ ಸಾಕ್ಷಿಯಾಗಲು ಆಗಲ್ಲ ಎಂದು ಹೇಳಿದ್ರು.

ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ನಾನು ಊರಿಗೆ ಭೇಟಿ ನೀಡಬಹುದಿತ್ತು. ಆ ವೇಳೆ ಮೃತರ ಪೋಷಕರು ಸುಮ್ಮನಿದ್ದರೂ ಉಳಿದವರು ಸುಮ್ಮನಿರುವುದಿಲ್ಲ ಅನ್ನೋ ಕಾರಣಕ್ಕೆ ಭೇಟಿ ನೀಡಿಲ್ಲ. ಮೃತರನ್ನ ಮತ್ತೆ ವಾಪಸ್ ಕೊಡಲು ಸಾಧ್ಯವಿಲ್ಲ. ಆದರೆ ಮಾನವೀಯತೆಯ ಆಧಾರದ ಮೇಲೆ ನನ್ನ ಕೈಲಾದಷ್ಟು ನೆರವು ನೀಡಿದ್ದೇನೆ ಅಂದ್ರು.

ನಿಮ್ಮ ಮಗ ಅಂದುಕೊಳ್ಳಿ:
ಇಲ್ಲಿ ಪ್ರಕರಣ ಸಂಬಂಧ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹಾಕಿಲ್ಲ. ಒತ್ತಡ ಹಾಕಿ ಕೇಸ್ ವಾಪಸ್ ತೆಗೆದುಕೊಳ್ಳಲೂ ಆಗುವುದಿಲ್ಲ ಎಂದು ಹೇಳಿ ಶಾಸಕರು ಪರಿಹಾರ ನೀಡಿದ್ದಾರೆ. ಈ ವೇಳೆ ನನ್ನ ಮಗನ ತಂದುಕೊಡಲು ಸಾಧ್ಯವೇ ಎಂದು ಮೃತರ ತಾಯಿ ಪ್ರಶ್ನಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅದಕ್ಕೆ ಅಮ್ಮ ಇನ್ನು ಮುಂದೆ ನನ್ನನ್ನೇ ನಿಮ್ಮ ಮಗ ಎಂದುಕೊಳ್ಳಿ ಎಂದರು.

ಗ್ರಾಮದಲ್ಲಿ ಮಗನ ಹೆಸರಿನಲ್ಲಿ ದೇವಾಲಯ ನಿರ್ಮಿಸಲು ಉದ್ದೇಶಿಸಿದ್ದೇವೆ ಅದು ಮಗನ ಆಸೆಯಾಗಿತ್ತು ಇದಕ್ಕೆ ನೆರವು ನೀಡಿ ಎಂದ ತಾಯಿ ಶಾಸಕರನ್ನು ಕೇಳಿದ್ರು. ಈ ವೇಳೆ ಸಿ.ಟಿ ರವಿ ಅವರು ನೆರವಿನ ಭರವಸೆ ನೀಡಿದ್ರು.

ಮಂಡ್ಯ, ತುಮಕೂರು, ಚಿಕ್ಕಮಗಳೂರು, ಶಾಸಕ, ಸಿ.ಟಿ ರವಿ, ಕಾರು, ಅಪಘಾತ, ಪಬ್ಲಿಕ್ ಟಿವಿ, mandya, tumkur, chikkamagaluru, mla, ct ravi, car, accident, public tv

Share This Article
Leave a Comment

Leave a Reply

Your email address will not be published. Required fields are marked *