ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ

Public TV
4 Min Read

– ದೇಶದಲ್ಲಿರುವ ರೈತರ ಬಡತನ ದೂರವಾಗಿದೆ
– ಕಿಸಾನ್ ಸಮ್ಮಾನ್ ವಿರೋಧಿಸಿದ ರಾಜ್ಯಗಳಿಗೆ ಟಾಂಗ್
– ಗ್ರಾಮಗಳು ಭವಿಷ್ಯದ ಖಜಾನೆಗಳು
– ದೇಶದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಲಿದೆ

ತುಮಕೂರು: ನಿರೀಕ್ಷಿತ ಪ್ರಮಾಣದಲ್ಲಿ ನೆರೆ ಪರಿಹಾರ ಬಿಡುಗಡೆಯಾಗಿಲ್ಲ. ಪರಿಹಾರಕ್ಕಾಗಿ ಮೂರ್ನಾಲ್ಕು ಭಾರಿ ಮನವಿ ಮಾಡಿದ್ದೇನೆ. ಆದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಯಡಿಯೂರಪ್ಪನವರು ಇಂದು ವೇದಿಕೆಯಲ್ಲೇ ಮತ್ತೊಮ್ಮೆ ಕೈ ಮುಗಿದು ಮನವಿ ಮಾಡಿದರೂ ಪರಿಹಾರ ನೀಡುವ ಬಗ್ಗೆ ಮೋದಿ ಯಾವುದೇ ಮಾತನ್ನು ಆಡಲಿಲ್ಲ.

ತುಮಕೂರಿನಲ್ಲಿ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಮುಂದೆ ನೆರೆ ಪರಿಹಾರಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಂಜೆ ಮತ್ತೆ ರಾಜಭವನಕ್ಕೆ ತೆರಳಿ ಪರಿಹಾರ ಬಿಡುಗಡೆ ಕುರಿತು ಚರ್ಚಿಸುತ್ತೇನೆ ಎಂದು ರೈತರಿಗೆ ಸಿಎಂ ಈ ವೇಳೆ ಭರವಸೆ ನೀಡಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಹಾಗನಿ ಗಿಡಕ್ಕೆ ನೀರೆರೆದರು. ಬಳಿಕ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಹಸಿರು ಶಾಲು ಹಾಕಿ, ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಿದರು. ಬಳಿಕ ಕೃಷಿ ಸಮ್ಮಾನ್ ಯೋಜನೆಯ ಎರಡನೇ ಹಂತದ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಕೃಷಿ ಸಮ್ಮಾನ್ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಿದರು.

ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಮಾತನಾಡಿ, ಎಲ್ಲರಿಗೂ ನಮಸ್ಕಾರ. ಮೊದಲಿಗೆ ನಿಮ್ಮೆಲ್ಲರಿಗೆ ಹೊಸ ವರ್ಷದ ಶುಭಾಶಯಗಳು. ಸುಗ್ಗಿ ಹಬ್ಬ ಸಂಕ್ರಾಂತಿಯ ಶುಭಾಶಯಗಳು ಎಂದು ತಿಳಿಸಿದರು.

ಹೊಸ ವರ್ಷದಲ್ಲಿ ನಿಮ್ಮೆಲ್ಲರನ್ನ ದರ್ಶನ ಮಾಡುವ ಭಾಗ್ಯ ಸಿಕ್ಕಿದೆ. ರೈತರನ್ನು ರೈತ ಸಹೋದರಿಯನ್ನ ಭೇಟಿ ಮಾಡುತ್ತಿದ್ದೇನೆ. ಆಹಾರ ಉತ್ಪಾದನೆಯಲ್ಲಿ ಗರಿಷ್ಠ ಸಾಧನೆ ಮಾಡಿದ್ದೇವೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಯತ್ತ ಸಾಗಿದೆ. ಕೃಷಿ ಕರ್ಮಣ್ ಪ್ರಶಸ್ತಿ ಅದಕ್ಕೆ ಅರ್ಹವಾಗಿದೆ ಎಂದು ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಿ ಮೋದಿ ಅಭಿನಂದಿಸಿದರು.

ಇವತ್ತು 6 ಕೋಟಿ ರೈತರ ಖಾತೆಗೆ 12 ಕೋಟಿ ರೂ. ಹಣ ಜಮೆಯಾಗಿದೆ. ಮೊದಲು ಒಂದು ರೂಪಾಯಿಗಲ್ಲಿ 15 ಪೈಸ ಮಾತ್ರ ರೈತರಿಗೆ ಸಿಗುತಿತ್ತು. 85 ಪೈಸೆ ಮಾಯ ಆಗುತ್ತಿತ್ತು. ಈಗ ಒಂದು ರೂಪಾಯಿ ಸಂಪೂರ್ಣವಾಗಿ ರೈತನಿಗೆ ಸೇರುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಯಾರು ಅಳವಡಿಸಿಕೊಂಡಿಲ್ಲವೋ ಆ ರಾಜ್ಯಗಳು ಅಳವಡಿಸಿಕೊಳ್ಳಲಿ. ಯಾವುದೇ ಪಕ್ಷದ ಯೋಜನೆ ಅಂತ ಬೇಧ-ಭಾವ ಮಾಡಬೇಡಿ ಎಂದು ಯೋಜನೆ ವಿರೋಧಿಸಿದ ರಾಜ್ಯಗಳಿಗೆ ಟಾಂಗ್ ಕೊಟ್ಟರು.

ದೇಶದಲ್ಲಿರುವ ರೈತರ ಬಡತನ ದೂರವಾಗಿದೆ. ರೈತರಿಗೆ ಸಿಗಬೇಕಾದ ನೆರವು ಸಂಪೂರ್ಣ ಸಿಗುತ್ತಿದೆ. ಮಧ್ಯವರ್ತಿಗಳ ಪಾಲಾಗುವುದನ್ನ ತಪ್ಪಿಸಿದ್ದೇನೆ. ಕೇಂದ್ರದ ಯೋಜನೆಗಳನ್ನ ಸಮಪರ್ಕವಾಗಿ ತಲುಪಿಸಿವೆ. ನಮ್ಮ ಸರ್ಕಾರ ಕೃಷಿಕರ ಪರವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಕೃಷಿಕರನ್ನು ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ನೀರಾವರಿ ಯೋಜನೆ, ಫಸಲ್ ಬೀಮಾ ಯೋಜನೆ, ನೀಮ್ ಕೋಟ್ ಯುರಿಯಾ ನಾವು ಜಾರಿಗೆ ತಂದಿದ್ದೇವೆ. ನಮ್ಮ ಸರ್ಕಾರ ಎಂಎಸ್‍ಪಿ ಹೆಚ್ಚಳ ಮಾಡಿದ್ದೇವೆ. ರೈತರ ಭವಿಷ್ಯ ಸಮಸ್ಯೆಗೆ ಪರಿಹಾರ ಕಂಡು ಹಿಡುವ ಕೆಲಸ ಮಾಡುತ್ತಿದ್ದೇವೆ. ದೇಶದ ಯಾವುದೇ ಕಡೆ ರೈತ ತನ್ನ ಬೆಳೆ ಮಾರಲು ಇ-ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದರು.

ಗ್ರಾಮಗಳು ಭವಿಷ್ಯದ ಖಜಾನೆಗಳು. ರೈತರ ಬೆಳೆಗಳು ರಕ್ಷಣೆಯಾಗಬೇಕು. ದಾನ್ಯ ರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಜಾರಿಗೆ ತರುತ್ತೇವೆ. ಶೀತಲೀಕರಣ ಘಟಕಗಳ ಸಾಮಥ್ರ್ಯ ವೃದ್ಧಿಸುತ್ತೇವೆ. ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ದೇಶದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಲಿದೆ. ಇದಕ್ಕೆ ಅಗತ್ಯವಾದ ಸೌಕರ್ಯ ನಾವು ನಿರ್ಮಾಣ ಮಾಡುತ್ತಿದ್ದೇವೆ. ಈ ಮೂಲಕ ಆರ್ಥಿಕತೆ ಅಭಿವೃದ್ಧಿಗೆ ಕ್ರಮ ತಗೆದುಕೊಳ್ಳುತ್ತೇವೆ ಎಂದರು.

ದಕ್ಷಿಣ ಭಾರತದ ಕೃಷಿಗೆ ಅತ್ಯಂತ ವಿಶೇಷವಾಗಿದೆ. ಇದನ್ನು ರಫ್ತು ಉದ್ಯಮದಲ್ಲಿ ಬಳಸಿಕೊಳ್ಳುವ ಕೆಲಸ ಮಾಡುತ್ತೇವೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ಇನ್ನಷ್ಟು ಕ್ರಮ ತಗೆದುಕೊಳ್ಳುತ್ತೇವೆ. ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗೆ ಬದಲಾವಣೆಯಾಗಬೇಕಿದೆ. ಸಾಂಬಾರ ಪದಾರ್ಥ ಉತ್ಪಾದನೆಯಲ್ಲಿ ನಮ್ಮ ದೇಶ ಮುಂದಿದೆ. ತೆಲಂಗಾಣದಲ್ಲಿ ಅರಿಶಿಣ ಉತ್ಪಾದನೆ ಹೆಚ್ಚಿದೆ. ಇದನ್ನು ದೇಶ್ಯಾದ್ಯಂತ ಹೆಚ್ಚಳ ಮಾಡುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಭಾಷಣದ ವೇಳೆ ವೇದಿಕೆ ಬಲಭಾಗದಲ್ಲಿ ಕುಳಿತಿದ್ದ ಜನರಿಗೆ ಪ್ರಧಾನಿ ಮೋದಿ ಅವರ ಭಾಷಣ ಕೇಳುತ್ತಿರಲಿಲ್ಲ. ಇದನ್ನ ಗಮನಿಸಿದ ಅವರು, ಅವರಿಗೆ ನನ್ನ ಭಾಷಣ ಕೇಳುತ್ತಿಲ್ಲ. ವ್ಯವಸ್ಥೆ ಸರಿ ಮಾಡಿ ಎಂದು ತಿಳಿಸಿದರು.

ಬಳಿಕ ಭಾಷಣ ಮುಂದುವರಿಸಿ, ರಾಜ್ಯದಲ್ಲಿ ತೆಂಗು ಉತ್ಪನ್ನವನ್ನು ಹೆಚ್ಚಿದೆ. ತೆಂಗು ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುತ್ತೇವೆ. ತೆಂಗು ಬೆಳೆಗಾರರಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುತ್ತೇವೆ. ರಬ್ಬರ್ ಉತ್ಪಾದನೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಕಾಫಿ ಬೆಳೆ ಅಭಿವೃದ್ಧಿಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಕಾಫಿ ಬೋರ್ಡ್ ಇದೆ. ಇದಕ್ಕೆ ಮತ್ತಷ್ಟು ಬಲವರ್ಧನೆ ಮಾಡುವ ಕೆಲಸ ಮಾಡಿಲಿದ್ದೇವೆ ಎಂದರು.

ದೇಶ್ಯಾದ್ಯಂತ ಜಲ ಸಂಕಟ ನಿವಾರಣೆಗೆ ಕ್ರಮ ತೆಗೆದುಕೊಂಡಿದ್ದೇವೆ. ಜಲ್ ಜೀವನ್ ಮಿಷನ್ ಕಾರ್ಯಕ್ರಮದ ಮೂಲಕ ಜಲ ಸಂಕಟ ನಿವಾರಣೆಗೆ ಕ್ರಮ ತೆಗೆದುಕೊಂಡಿದ್ದೇವೆ. ಮೀನುಗಾರರಿಗೆ ಕಿಸಾನ್ ಕಾರ್ಡ್ ನೀಡುತ್ತೇವೆ. ಬಂದರುಗಳ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇವೆ. ಕೃಷಿಕರ ಆದಾಯ ದ್ವಿಗುಣ ಮಾಡುವುದು ನಮ್ಮ ಸಂಕಲ್ಪ. ಈ ಸಂಕಲ್ಪವನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದು.

Share This Article
Leave a Comment

Leave a Reply

Your email address will not be published. Required fields are marked *