ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

Public TV
2 Min Read

– ಬಿಡುವಿನ ಸಮಯದಲ್ಲಿ ಪಾಕ್ ನಿರ್ಮಾಣಕ್ಕೆ ಶ್ರಮದಾನ

ತುಮಕೂರು: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸದಲ್ಲೇ ಜೀವನ ಕಳೆದು ಹೋಗುತ್ತೆ. ಆದರೆ ಈ ಎಲ್ಲಾ ಒತ್ತಡಗಳ ನಡುವೆ ತುಮಕೂರು ಜಿಲ್ಲೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಇಲ್ಲಿನ ಕುಣಿಗಲ್ ತಾಲೂಕಿನ ಅಮೃತ್ತೂರು ಠಾಣಾ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ಅಮೃತೂರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ಬೈಕ್‍ಗಳು, ಅಪಘಾತವಾದ ಕಾರುಗಳ ಬದಲಾಗಿ ಹಚ್ಚ ಹಸಿರಿನ ವಾತಾವರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ತಂಪು ತಂಗಾಳಿ ನಮ್ಮ ಮನ ಮುದಗೊಳಿಸುತ್ತದೆ. ಇಲ್ಲಿನ ಪೊಲೀಸರು ಸ್ವತಃ ತಾವೇ ಶ್ರಮದಾನದ ಮೂಲಕ ಮುದ್ದಾದ ಉದ್ಯಾನವನ ನಿರ್ಮಿಸಿಕೊಂಡು ತಮ್ಮ ಪರಿಸರ ಪ್ರೇಮ ತೋರಿದ್ದಾರೆ.

ಪ್ರಸ್ತುತ ಕ್ಯಾತಸಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‍ಐ ರಾಜು ಈ ಪಾರ್ಕ್ ನಿರ್ಮಾಣಕ್ಕೆ ಕಾರಣಿಕರ್ತರು. ರಾಜು ಅಮೃತ್ತೂರಲ್ಲಿ ಕಾರ್ಯನಿರ್ವಹಿಸುತಿದ್ದ ಸಂದರ್ಭದಲ್ಲಿ ಅವರ ಆಸಕ್ತಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸುಂದವಾದ ಪಾರ್ಕ್ ಕಂಗೊಳಿಸುತಿದೆ. ಈ ಠಾಣೆಯ ಅಧಿಕಾರಿಗಳು ಎಷ್ಟೇ ಒತ್ತಡ ಇದ್ದರೂ ತಮ್ಮ ಕರ್ತವ್ಯದ ನಡುವೆ ಶ್ರಮದಾನದ ಮೂಲಕ ಅತ್ಯಂತ ಸುಂದರವಾದ ಪಾರ್ಕ ಕಟ್ಟಿಕೊಂಡಿದ್ದಾರೆ. ಬಿಡುವಿನ ವೇಳೆ ಬಂದು ಶ್ರದ್ಧೆಯಿಂದ ಶ್ರಮದಾನ ಮಾಡಿ ತಮ್ಮ ಠಾಣೆಯ ಆವರಣ ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡಿಕೊಂಡಿದ್ದಾರೆ.

ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಿದ್ದು, ಮಧ್ಯ ಕಲ್ಲಿನ ಮಂಟಪ, ವಿವಿಧ ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು, ಹಣ್ಣಿನ ಗಿಡಗಳು ಹೀಗೆ ಸ್ವಚ್ಚ ಸುಂದರವಾಗಿ ಉದ್ಯಾನವನ ಮೂಡಿಬಂದಿದೆ. ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಅಮೃತೂರಿನ ಕೆಲ ಸಾರ್ವಜನಿಕರೂ ಕೂಡಾ ಈ ಪಾರ್ಕ್‍ಲ್ಲಿ ಬಂದು ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ. ಹಾಗೇಯೇ ಪೊಲೀಸರು ಕೂಡಾ ಹಚ್ಚಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ನಲ್ಲಿ ಕುಳಿತು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ.

ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೇ ಸ್ವತಃ ತಮ್ಮ ಹಣ ವಿನಿಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ. ಪಿಎಸ್‍ಐ ರಾಜು ಕೇವಲ ಅಮೃತ್ತೂರು ಠಾಣೆ ಅಷ್ಟೆ ಅಲ್ಲಾ ಕೆ.ಬಿ ಕ್ರಾಸ್ ಠಾಣೆ ಎದುರಲ್ಲೂ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ಭಾನುವಾರ ಪರೇಡ್ ಮುಗಿದ ಬಳಿಕ ಪಾರ್ಕ್ ನಿರ್ವಹಣೆ ಕೆಲಸ ಮಾಡಲಾಗುತ್ತಿದ್ದು, ಕಳೆ ಕೀಳುವುದು, ಎಲೆಗಳನ್ನು ಕಟ್ ಮಾಡಿ ಸುಂದರಗೊಳಿಸುತ್ತಾರೆ. ಒಟ್ಟಾರೆ ಖಾಕಿಗಳ ಕೈಚಳಕದಲ್ಲಿ ಕಂಗೊಳಿಸುತ್ತಿದ್ದ ಉದ್ಯಾನವನ ಎಲ್ಲರ ಆಕರ್ಷಣಿಯ ಸ್ಥಳವಾಗಿದೆ.

ಪಿಎಸ್‍ಐ ರಾಜು ಅವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *