ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ ಪರಮೇಶ್ವರ್ ಹೆಸರು – ಬಿಜೆಪಿ ಕೆಂಡ

2 Min Read

ತುಮಕೂರು: ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿಜಿ ಹೆಸರು ಕೈ ಬಿಟ್ಟಿರೋದಕ್ಕೆ ಇಡೀ ದೇಶದಲ್ಲಿ ಕಾಂಗ್ರೆಸ್ (Congress) ವಿರೋಧಿಸುತ್ತಿದೆ. ಆದರೆ ಇದರ ಬೆನ್ನಲ್ಲೇ ತುಮಕೂರಿನ (Tumakuru) ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ (Mahatma Gandhi Stadium) ಅದೇ ಕಾಂಗ್ರೆಸ್ ನಾಯಕ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಅವರ ಹೆಸರನ್ನು ನಾಮಕರಣ ಮಾಡಿರೋದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಮೂಲಕ ವಿರೋಧ ಪಕ್ಷ ಬಿಜೆಪಿ (BJP) ಕೈಗೆ ಕಾಂಗ್ರೆಸ್ ಹೊಸದೊಂದು ಅಸ್ತ್ರ ಕೊಟ್ಟಂತಾಗಿದೆ.

ತುಮಕೂರು ಜಿಲ್ಲೆಯ ಏಕೈಕ ಜಿಲ್ಲಾಮಟ್ಟದ ಕ್ರೀಡಾಂಗಣ ಅಂದರೆ ಅದು ಮಹಾತ್ಮಾ ಗಾಂಧಿ ಕ್ರೀಡಾಂಗಣ. ಎಲ್ಲಾ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮ ನಡೆಯೋದು ಇಲ್ಲಿಯೇ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮರು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಪ್ರತ್ಯೇಕ ನಾಮ ಫಲಕ ಇಲ್ಲದೇ ಇದ್ದರೂ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣ ಅಂತಲೇ ಅಧಿಕೃತವಾಗಿ ಕರೆಯಲಾಗುತಿತ್ತು. ಈ ನಡುವೆ ಕಳೆದ ಮೂರು ದಿನದ ಹಿಂದೆ ಏಕಾಏಕಿಯಾಗಿ ಈ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವರೂ ಆದ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರ ಹೆಸರಿನ ನಾಮ ಫಲಕವನ್ನು ಹಾಕಲಾಗಿದೆ. ಸುಮಾರು ಐದು ಕಡೆ ಜಿ ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಎಂದು ನಾಮಫಲಕ ಹಾಕಲಾಗಿದೆ. ಇದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಜಿಲ್ಲಾ ಬಿಜೆಪಿ ಘಟಕ ಇದರ ವಿರುದ್ಧ ಪ್ರತಿಭಟಿಸಿದೆ. ಪರಮೇಶ್ವರ್ ಹೆಸರನ್ನು ತೆರವುಗೊಳಿಸಿ ಪುನಃ ಗಾಂಧೀಜಿ ಹೆಸರನ್ನು ಹಾಕುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಪತ್ನಿಗೆ ವಂಚನೆ – ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗ ಸಿಕ್ಕಿ ಬಿದ್ದ ಟೆಕ್ಕಿ ಅರೆಸ್ಟ್‌

ಸೋಮವಾರ ಸಂಜೆ 5 ರಿಂದ 7:30ರವರೆಗೆ ಪ್ರತಿಭಟನೆ ಮಾಡಿದ ಕಾರ್ಯಕರ್ತರಿಗೆ ಜಿಲ್ಲಾಡಳಿತ ಕ್ಯಾರೇ ಅಂದಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕ್ರೀಡಾಂಗಣ ಒಳಗಡೆ ನುಗ್ಗಿ ನಾಮಫಲಕ ತೆರವುಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ಕೊನೆಗೆ ಪೊಲೀಸರು ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ರು.. ಯಾವುದೇ ಸರ್ಕಾರಿ ಕಟ್ಟಡಗಳಿಗೆ ನಾಮಕರಣ ಮಾಡಬೇಕಿದ್ದರೆ ಸ್ಥಳೀಯ ಸಂಸ್ಥೆ ಅಥವಾ ಸಂಬಂಧ ಪಟ್ಟ ಇಲಾಖೆಯಿಂದ ಠರಾವು ಆಗಬೇಕಿದೆ. ಇಂಥಹ ಯಾವುದೇ ಠರಾವು ಆಗದೇ ಏಕಾಏಕಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ನಗರ ಶಾಸಕ ಜ್ಯೋತಿಗಣೇಶ್ ಆರೋಪಿಸಿದ್ದಾರೆ. ಪಾಲಿಕೆ ವ್ಯಾಪ್ತಿಯೊಳಗೆ ಕ್ರೀಡಾಂಗಣ ಬರುವುದರಿಂದ ಪಾಲಿಕೆ ಆಗಲಿ ಅಥವಾ ಕ್ರೀಡಾ ಇಲಾಖೆಯಲ್ಲೂ ಪರಮೇಶ್ವರ್ ಹೆಸರು ಇಡೋ ಬಗ್ಗೆ ಠರಾವು ಆಗಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಸಂಕ್ರಾತಿಯಂದು ಗವಿಗಂಗಾಧರನಿಗೆ ಭಾಸ್ಕರನ ನಮನ – 2 ನಿಮಿಷಗಳ ಕಾಲ ನಡೆಯಲಿದೆ ಸೂರ್ಯ ಪೂಜೆ

ಇದೇ ಜನವರಿ 16 ರಿಂದ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಇಲ್ಲದೇ ಇದ್ದರೂ ಅಧಿಕಾರಿಗಳು ತರಾತುರಿಯಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರಿನ ಬದಲು ಜಿ ಪರಮೇಶ್ವರ್ ಅವರ ಹೆಸರಿನ ನಾಮಫಲಕ ಹಾಕಿದ್ದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಖಮೇನಿ ವಿರುದ್ಧ ಸಿಟ್ಟು – 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ

Share This Article