ತುಮಕೂರು ಜಿ.ಪಂ- ಅತೃಪ್ತರಲ್ಲೇ ಭಿನ್ನಮತ

Public TV
3 Min Read

ತುಮಕೂರು: ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ರಗಳೆ ಸದ್ಯಕ್ಕಂತೂ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಹಾಲಿ ಅಧ್ಯಕ್ಷರ ವಿರುದ್ಧ ಸಿಡಿದೆದ್ದಿರುವ ಸ್ವಪಕ್ಷ ಸದಸ್ಯರ ಭಿನ್ನಮತ ಶಮನಕ್ಕೆ ಮುಂದಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರವನ್ನ ಉಳಿಸಿಕೊಳ್ಳಲು ಜಾಣ ನಡೆ ಅನುಸರಿಸಿದ್ದಾರೆ. ಇತರೆ ಪಕ್ಷದ ಸದಸ್ಯರ ಬೆಂಬಲ ಪಡೆದು ಬಲ ಪ್ರದರ್ಶನ ಮಾಡಿದರೆ ಮಾತ್ರ ಹಾಲಿ ಅಧ್ಯಕ್ಷರ ರಾಜೀನಾಮೆಗೆ ಸೂಚಿಸುತ್ತೇನೆ ಎಂದು ಹೇಳುವ ಮೂಲಕ ಕುದುರೆ ವ್ಯಾಪಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹೌದು, ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಗೊಂದಲದ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿಂದು ಪಕ್ಷದ ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಶಾಸಕ ಸುಧಾಕರ್ ಲಾಲ್ ಸೇರಿದಂತೆ 14 ಮಂದಿ ಸದಸ್ಯರು ಪಾಲ್ಗೊಂಡಿದ್ರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದು ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅಸಮಾಧಾನ, ಆಕ್ರೋಶ ಹೊರ ಹಾಕಿ ಕೆಳಗಿಳಿಸಬೇಕು, ಬದಲಾಗಿ ಶೆಟ್ಟಿಕೆರೆ ಕ್ಷೇತ್ರದ ಸದಸ್ಯ ಕಲ್ಲೇಶ್‍ರವರನ್ನ ಅಧ್ಯಕ್ಷರನ್ನಾಗಿ ಮಾಡಿ ಎಂದು ಬೇಡಿಕೆ ಇರಿಸಲಾಗಿದೆ. ಇದೇ ವೇಳೆ ಅಮೃತೂರು ಸದಸ್ಯೆ ಮಂಜುಳಾ ಶೇಷಗಿರಿ ನನಗೂ ಉಪಾಧ್ಯಕ್ಷ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ವೇಳೆ ಅಧ್ಯಕ್ಷರನ್ನ ನಾಳೆಯೇ ರಾಜೀನಾಮೆ ಕೊಡಲು ಹೇಳುತ್ತೇನೆ, ಆದರೆ ಎಲ್ಲರನ್ನ ವಿಶ್ವಾಸಕ್ಕೆ ಕೊಂಡೊಯ್ಯುವ ಸದಸ್ಯರು ಬೇಕಲ್ಲವೇ. ಇಬ್ಬರೂ ಅಧ್ಯಕ್ಷ, ಉಪಾಧ್ಯಕ್ಷರಾಗುವುದಾದರೆ ನಾಳೆಯೇ ಅಧ್ಯಕ್ಷರ ರಾಜೀನಾಮೆ ಕೊಡಿಸುತ್ತೇನೆ. ಅದಕ್ಕೂ ಮೊದಲು ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ್ದಾರೆ ಎನ್ನಲಾದ ಕಾಂಗ್ರೆಸ್, ಬಿಜೆಪಿ ಸದಸ್ಯರು ನಿಮ್ಮ ಆಯ್ಕೆಗೆ ಬೆಂಬಲ ನೀಡ್ತಾರಾ ಅನ್ನೋದನ್ನ ಕನ್‍ಫರ್ಮ್ ಮಾಡಬೇಕು, ಅದೇನ್ ಮಾಡ್ತೀರೋ ಮಾಡಿ, ವಿಪ್ ಉಲ್ಲಂಘಿಸಿ ಬರುವವರನ್ನೂ ಕರೆ ತನ್ನಿ, ಅಲ್ಲಿವರೆಗೂ ಅವಿಶ್ವಾಸ ನಿರ್ಣಯ ತರಬಾರದು ಎಂದು ಕಲ್ಲೇಶ್‍ಗೆ ಟಾಸ್ಕ್ ನೀಡಿದ್ದಾರೆ ಎನ್ನಲಾಗ್ತಿದೆ.

ಜೆಡಿಎಸ್ ವರಿಷ್ಠರು ಕಲ್ಲೇಶ್‍ಗೆ ಟಾಸ್ಕ್ ನೀಡಿರೋದು ಇದೀಗ ಅತೃಪ್ತ ಸದಸ್ಯರಲ್ಲೇ ಭಿನ್ನಮತ ಸೃಷ್ಟಿಸಿದೆ. ಜೆಡಿಎಸ್‍ನ ಭಿನ್ನಮತವನ್ನೇ ಲಾಭ ಮಾಡಿಕೊಂಡು ಅಧ್ಯಕ್ಷ ಗಾದಿಗೇರಬಹುದು ಎಂದುಕೊಂಡಿದ್ದ ಕಾಂಗ್ರೆಸ್‍ನ ವೈ.ಸಿ.ಸಿದ್ದರಾಮಣ್ಣ, ಜಿ.ಜೆ.ರಾಜಣ್ಣ ಸೇರಿದಂತೆ ಹಲವರು ಈಗ ಉಲ್ಟಾ ಹೊಡೆಯಲು ಆರಂಭಿಸಿದ್ದಾರೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಸಹಿ ಸಂಗ್ರಹಕ್ಕೆ ಮುಂದಾಗಿದ್ದ ಕಾಂಗ್ರೆಸ್‍ನ ಹುಳಿಯಾರು ವೈ.ಸಿ.ಸಿದ್ದರಾಮಣ್ಣ, ಸಿದ್ದಾಪುರ ಜಿ.ಜೆ.ರಾಜಣ್ಣ, ಜೆಡಿಎಸ್‍ನ ಪುರವರ ತಿಮ್ಮಣ್ಣ ಸೇರಿದಂತೆ ಕೆಲ ಸದಸ್ಯರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೀಗ ಜೆಡಿಎಸ್‍ನ ಕಲ್ಲೇಶ್‍ಗೆ ಟಾಸ್ಕ್ ನೀಡಿರೋದು ಸಹಜವಾಗಿ ಅತೃಪ್ತರಲ್ಲಿ ಅಸಮಾಧಾನ ಮೂಡಿಸಿದ್ದು ಕಾಂಗ್ರೆಸ್ ಸೇರಿದಂತೆ ಉಭಯ ಪಕ್ಷಗಳ ವಿಶ್ವಾಸಗಳಿಸಲು ಕಲ್ಲೇಶ್ ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ಜೆಡಿಎಸ್‍ಗೆ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನ ನೀಡಲು ಟಾಸ್ಕ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರ ಕಣ್ಣು ಕೆಂಪಾಗಿಸಿದೆ. ಬದಲಾಗಿ ತಮ್ಮದೇ ಸಮುದಾಯದ ಅಧ್ಯಕ್ಷರ ವಿರುದ್ಧ ಸಿಡಿದೆದ್ದಿದ್ದ ವೈ.ಸಿ.ಸಿದ್ದರಾಮಣ್ಣ, ಪುರವರ ತಿಮ್ಮಣ್ಣ, ಚೆನ್ನಮಲ್ಲಪ್ಪ , ಹೊನ್ನವಳ್ಳಿ ನಾರಾಯಣ್, ನೊಣವಿನಕೆರೆ ಮೈಲಾರಪ್ಪ ಲತಾ ರವಿಕುಮಾರ್ ಪರ ನಿಲ್ಲಲು ಕುರುಬ ಸಮಾಜದ ಮುಖಂಡರು ಒತ್ತಡ ಹೇರುತ್ತಿದ್ದಾರೆ, ಯಾಕಂದ್ರೆ ಇನ್ನೊಂದು ವರ್ಷ ಕಳೆದರೆ ಲತಾ ರವಿಕುಮಾರ್ ಐದು ವರ್ಷ ಸಂಪೂರ್ಣ ಅಧಿಕಾರ ಅನುಭವಿಸಿದ ಏಕೈಕ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹೀಗಾಗಿ ಕ್ಯಾಸ್ಟ್ ಕಾರ್ಡ್ ಕೂಡ ಇಲ್ಲಿ ಪ್ಲೇ ಆಗುತ್ತಿದೆ.

ಮೂಲಗಳ ಪ್ರಕಾರ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಲತಾ ರವಿಕುಮಾರ್ ಬೆನ್ನಿಗೆ ನಿಂತಿದ್ದು ಬದಲಾವಣೆ ಮಾಡದಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಹೀಗಾಗಿಯೇ ತಮ್ಮ ಮೂಲಗಳಿಂದ ತರಿಸಿಕೊಂಡ ವರದಿ ಪಡೆದ ಕುಮಾರಸ್ವಾಮಿ ಅತೃಪ್ತರ ನಡುವೆಯೇ ಭಿನ್ನಮತ ಸೃಷ್ಠಿಸುವ ಮೂಲಕ ಹಾಲಿ ಅಧ್ಯಕ್ಷರನ್ನ ಮುಂದುವರೆಸಲು ಜಾಣ ನಡೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಕಾಂಗ್ರೆಸ್‍ನಲ್ಲಿ ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಬೆಂಬಲಿಗ ಸದಸ್ಯರ ನಡುವೆಯೇ ಕೋಲ್ಡ್ ವಾರ್ ನಡೆಯುತ್ತಿದ್ದು, ಪರಂ ಬೆಂಬಲಿಗ ಸದಸ್ಯರು ಮಾತ್ರ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಬಿಜೆಪಿಯಲ್ಲೂ ಅಧ್ಯಕ್ಷರನ್ನ ಬದಲಾವಣೆ ಮಾಡಿದರೆ ಉಪಾಧ್ಯಕ್ಷರನ್ನೂ ಬದಲಾವಣೆ ಮಾಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅತೃಪ್ತ ಆಟ ಅಂತ್ಯವಾಗುತ್ತಾ ಅಥವ ಕುದುರೆ ವ್ಯಾಪಾರದ ಮೂಲಕ ಸಕ್ಸಸ್ ಆಗುತ್ತಾ ಅನ್ನೋದೆ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *