ಭುಗಿಲೆದ್ದ ರೈತರ ಆಕ್ರೋಶ – ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತ

Public TV
1 Min Read

ತುಮಕೂರು: ರಾಮನಗರಕ್ಕೆ (Ramanagar) ಹೇಮಾವತಿ ನದಿ ನೀರು ಕೊಂಡೊಯ್ಯಲು ನಡೆಯುತ್ತಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ (Hemavati Express Link Canal) ಕಾಮಗಾರಿ ವಿರುದ್ಧದ ಪ್ರತಿಭಟನೆ ತೀವ್ರಗೊಡಿದೆ. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ, ಗುಬ್ಬಿ‌ (Gubbi) ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ 144 ಸೆಕ್ಷನ್ ಜಾರಿ ಮಾಡಿ, ಪ್ರತಿಭಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಪ್ರತಿಭಟನೆಗೆ ಬರುತ್ತಿದ್ದ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ 10 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೂ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಲು ತಂದಿದ್ದ ಬಸ್ ಚಕ್ರಗಳ ಗಾಳಿಯನ್ನೇ ರೈತರು ತೆಗೆದು ಹಾಕಿದ್ದಾರೆ. ಅಲ್ಲದೇ, ಬಸ್ ಮುಂದಕ್ಕೆ ಹೋಗದಂತೆ ತಡೆದು ಮಗುಚಿ ಹಾಕಲು ಯತ್ನಿಸಿದ್ದಾರೆ. ಇದರಿಂದ ಪೊಲೀಸರು ಪ್ರತಿಭಟನೆ ಹತ್ತಿಕ್ಕುವಲ್ಲಿ ವಿಫಲರಾಗಿದ್ದಾರೆ.

ಪ್ರತಿಭಟನಾಕಾರರು ನೀರಿನ ಪೈಪ್‍ಗಳನ್ನು ನಾಲೆಗೆ ತಳ್ಳಲು ಪ್ರಯತ್ನಿಸಿದರು. ಅಲ್ಲದೇ ಜೆಸಿಬಿ ಮೂಲಕ ನಾಲೆಗಳನ್ನು ಮುಚ್ಚಿಸಿದರು. ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಈ ವೇಳೆ, ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸುರೇಶ್‍ಗೌಡ, ಯಾವಾಗ ಸರ್ಕಾರ ರೈತ ವಿರೋಧಿ ನೀತಿ ಮಾಡುತ್ತೋ ಆಗ ರೈತರು ಹೋರಾಟ ಮಾಡ್ತಾರೆ. ಸರ್ಕಾರ ರೈತರ ನಿರ್ಣಾಯ ಕೇಳಿ ನಿರ್ಧಾರ ಮಾಡಬೇಕು. ಈಗ ಏಕಾಏಕಿ 10 ತಾಲೂಕುಗಳಿಗೆ ನೀರನ್ನು ಕಡಿತ ಮಾಡಿ ಒಂದೇ ಒಂದು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ. ನಾಲೆ ಮುಚ್ಚಲು ನಾವೇ ಸಿದ್ಧರಿದ್ದೇವೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಗೌರವ ಕೊಟ್ಟು ಗಾಂಧಿ ಮಾರ್ಗದಲ್ಲಿ ಹೋಗ್ತಿದ್ದೇವೆ. ಇದು ದೌರ್ಬಲ್ಯ ಎಂದುಕೊಂಡು ತಿಳಿದು ಒಂದು ವೇಳೆ ಕೆಲಸ ಶುರುಮಾಡಿದ್ರೆ. ನಮ್ಮ ಮೇಲೆ ನಾಲೆ ಮುಚ್ಚಿ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Share This Article