ಎಲೆರಾಂಪುರಗೆ ಕೇಂದ್ರ ಸರ್ಕಾರದಿಂದ ಉತ್ತಮ ಪಂಚಾಯ್ತಿ ಪುರಸ್ಕಾರ

Public TV
2 Min Read

ತುಮಕೂರು: ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದಿಂದ ‘ಉತ್ತಮ ಪಂಚಾಯ್ತಿ ಪುರಸ್ಕಾರ’ ಲಭಿಸಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಲೂಕಿನ ಗಡಿಭಾಗದ ಡಿ.ನಾಗೇನಹಳ್ಳಿ ಗ್ರಾಮವನ್ನು 2010ರಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಫಲವಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡ ಕಾರಣದಿಂದಾಗಿ ಗ್ರಾಮಕ್ಕೆ ‘ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ’ ಲಭಿಸಿದೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

ಗ್ರಾಮದ ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಕೃಷಿ ಹೊಂಡ, 5 ಚೆಕ್ ಡ್ಯಾಂ, 8 ಹಳೇ ಚೆಕ್ ಡ್ಯಾಂ ಅಭಿವೃದ್ಧಿ ಸೇರಿದಂತೆ ಕೆರೆ ಅಭಿವೃದ್ಧಿ ಹಾಗೂ ತಿರುವುಗಾಲುವೆ ಮೂಲಕ ನೀರು ಸಂಗ್ರಹಣೆ ಮಾಡಲಾಗಿದೆ. ಬರ ನಿರೋಧಕ ಒಣಬೇಸಾಯ, ತೋಟಗಾರಿಕೆಗೆ ಒತ್ತು ನೀಡಲಾಗಿದೆ.

ರಾಗಿ, ಒಣ ಭತ್ತ, ತೊಗರಿ ಹೀಗೆ ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ. ಬೆಟ್ಟದ ನೆಲ್ಲಿ, ಗೋಡಂಬಿ, ಹುಣಸೆ, ಮಾವು, ಹೆಬ್ಬೇವು ಸೇರಿದಂತೆ ಅರಣ್ಯ ಮರಗಳನ್ನು ಬೆಳೆಸಲಾಗಿದೆ. ನೀರಿನ ಮೂಲ ಹೆಚ್ಚಿರುವ ಕಾರಣ ಪ್ರಾಣಿ, ಪಕ್ಷಿ, ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಮಣ್ಣಿನ ಸವಕಳಿ ಹಾಗೂ ಮಳೆ ನೀರು ಇಂಗಿಸುವ ಸಲುವಾಗಿ ಗ್ರಾಮದ ಸುತ್ತಲಿನ ಜಮೀನುಗಳಲ್ಲಿ ಬದಿ ನಿರ್ಮಿಸಲಾಗಿದೆ.

10 ವರ್ಷಗಳಿಂದ ನಿಕ್ರಾ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದಾಗಿ ಅಂತರ್ಜಲ ವೃದ್ಧಿಯಾಗಿ ಈ ಭಾಗದಲ್ಲಿದ್ದ ನೀರಿನ ಬವಣೆ ನೀಗಿದೆ. ಸಂಪೂರ್ಣ ನಿಷ್ಕ್ರಿಯಗೊಂಡಿದ್ದ ಸುಮಾರು 25 ಕೊಳವೆ ಬಾವಿಗಳು ಮರು ಪೂರಣಗೊಂಡಿವೆ. ಒಣಗಿದ್ದ ಬಾವಿಗಳಲ್ಲಿ ನೀರು ನಿಂತಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

ಸಂಪೂರ್ಣ ಬೆಟ್ಟ ಹಾಗೂ ಗುಡ್ಡ ಪ್ರದೇಶವಾದ ಈ ಭಾಗದಲ್ಲಿ ಮೊದಲು ಮಳೆ ನೀರು ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡ ಕೃಷಿ ವಿಜ್ಞಾನ ಕೇಂದ್ರ ಡಿ.ನಾಗೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತ್ತು. ದೇಶದಲ್ಲಿ ಇದೇ ರೀತಿ ನಿಕ್ರಾ ಯೋಜನೆಯಡಿ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ರಾಜ್ಯದಲ್ಲಿ 4 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಗ್ರಾಮದಲ್ಲಿ ಯೋಜನೆ ಅನುಷ್ಠಾನಗೊಂಡು ಈಗ ಅದು ಸಫಲವಾದ್ದರಿಂದ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.

Share This Article
Leave a Comment

Leave a Reply

Your email address will not be published. Required fields are marked *