50 ಅಪಘಾತ, 35 ಸಾವು- ಹೆದ್ದಾರಿಗೆ ಗ್ರಾಮಸ್ಥರಿಂದ ಕಾಲಭೈರವ ಭೂತ ಹೋಮ

Public TV
2 Min Read

ತುಮಕೂರು: ರಸ್ತೆ ಅಪಘಾತದಿಂದ ಕಂಗೆಟ್ಟ ಗ್ರಾಮಸ್ಥರು ತುಮಕೂರು-ಪಾವಗಡ ಹೆದ್ದಾರಿಗೆ ಹೋಮ ಮಾಡುವ ಮೂಲಕ ದೇವರ ಮೊರೆ ಹೋಗಿದ್ದಾರೆ

ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಗ್ರಾಮದಲ್ಲಿ ನೂತನ ಕೆಶಿಪ್ ರಸ್ತೆಯ ನಿರ್ಮಾಣವಾದ ನಂತರ ಅಪಘಾತಗಳು ಹೆಚ್ಚಿದೆ. ಹೀಗಾಗಿ ಹೆದ್ದಾರಿಗೆ ಹೋಮ-ಹವನ ಮಾಡಿ ಸ್ಥಳೀಯರು ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಒಂದೇ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಅಪಘಾತ ಸಂಭವಿಸಿದ ಪರಿಣಾಮ 35 ಜನರ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಣ ಕಾಪಾಡುವಂತೆ ಬಸ್ ತಂಗುದಾಣದಲ್ಲಿ ಸೇರಿ ಸತತ 48 ಗಂಟೆಗಳ ಸಮಯ ‘ಕಾಲಭೈರವ ಭೂತ’ ಹೋಮ ನಡೆಸಿದ್ದಾರೆ.

ಕೆರೆಗಳಪಾಳ್ಯ ಗ್ರಾಮಸ್ಥರು ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನದವರೆಗೂ ನಿರಂತರವಾಗಿ ವಿನೂತನ ಕಾಲ ಭೈರವ ಭೂತ ಹೋಮವನ್ನು ಮಾಡಿದ್ದಾರೆ. 1 ತಿಂಗಳ ಅವಧಿಯಲ್ಲಿ ಈ ಗ್ರಾಮದ ಬಸ್‍ನಿಲ್ದಾಣದ ಪರಿಮಿತಿಯಲ್ಲಿಯೇ ಸುಮಾರು 11 ಅಪಘಾತಗಳು ನಡೆದಿದ್ದು, 9 ಮಂದಿ ಸಾವನ್ನಪ್ಪಿದ್ದರು. ವರ್ಷದ ಅವಧಿಯಲ್ಲಿ ಹುಣಸೇಮರದ ಹಟ್ಟಿಯಿಂದ ಮಧುಗಿರಿ ಬೈಪಾಸ್ ರಸ್ತೆಯವರೆಗೂ ಸತತ 35 ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ಹಲವರು ಶಾಶ್ವತ ಅಂಗವಿಕಲರಾಗಿದ್ದಾರೆ.

ಈ ಗ್ರಾಮದಲ್ಲಿ 250 ಮನೆಗಳಿದ್ದು, 1 ಸಾವಿರ ಜನಸಂಖ್ಯೆ ಇದೆ. ಈ ವಿಲಕ್ಷಣ ಸಾವಿನ ಅಪಘಾತದಿಂದ ಭಯಗೊಂಡ ಗ್ರಾಮಸ್ಥರು ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಡಾ.ನಾಗಲಿಂಗ ಆಚಾರ್ ಅವರ ನೇತೃತ್ವದಲ್ಲಿ ಹೋಮ ನಡೆಸಿ ಗ್ರಾಮದಲ್ಲಿ ಹಾದು ಹೋಗಿರುವ ಪ್ರತಿ 10 ಮೀಟರ್ ಗೆ ಕೆಶಿಪ್ ರಸ್ತೆ ಎಲ್ಲಾ ದಿಕ್ಕುಗಳಲ್ಲೂ ನಿಂಬೆ ಹಣ್ಣು ಮತ್ತು ಮೊಸರನ್ನ ಅರಿಶಿನ-ಕುಂಕುಮ, ಬೇವಿನ ಸೊಪ್ಪಿನಿಂದ ತೆಂಗಿನಕಾಯಿ ಒಡೆದು ನಿಂಬೆಹಣ್ಣು ಸಿಗಿದು ಶಾಂತಿ ಹೋಮವನ್ನು ನಡೆಸಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳಾದ ಕೆರೆಗಳಪಾಳ್ಯ, ವಸಂತಯ್ಯನರೊಪ್ಪ, ಕವಾಡಿಗರಪಾಳ್ಯದ ಗ್ರಾಮಸ್ಥರು ಕೈವಾಡದವರ ನೆರವಿನೊಂದಿಗೆ ಡೋಲು-ತಮಟೆ ವಾದ್ಯಗಳೊಂದಿಗೆ ಸುತ್ತಲಿನ ಆಂಜನೇಯ, ಈಶ್ವರ, ಗುರಿಕಲ್ಲು, ಮರಿಯಮ್ಮ, ಶನಿಮಹಾತ್ಮ ಹಾಗೂ ಶೆಟ್ಟಿಹಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ ನಡೆಸಲಾಯಿತು. ಯಾವುದೋ ದೈವದ ಶಾಂತಿಯಾಗಬೇಕು ಎಂಬ ಗ್ರಾಮಸ್ಥರ ಕೋರಿಕೆಯಂತೆ ಈ ಹೋಮ ನಡೆಸಿದ್ದು, ಈಗ ಸಮಾಧಾನವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.


ಗ್ರಾಮಸ್ಥರೇ ಬೆದರುವಷ್ಟು ಭಯದ ವಾತಾವರಣ ಕಳೆದ ವರ್ಷದಿಂದ ಇದ್ದು, ಈ ಶಾಂತಿ ಹೋಮದ ಸಂಕಲ್ಪವಾದ ದಿನದಿಂದ ಯಾವುದೇ ಅಪಘಾತ ನಡೆದಿಲ್ಲ. ಇದು ನಮ್ಮ ಹಿರಿಯರ ದೈವದ ಸಂತೃಪ್ತಿಯ ಸಂಕೇತವಾಗಿದ್ದು, ಈ ಭೈರವ ಭೂತ ಹೋಮದಿಂದ ಎಲ್ಲರಿಗೂ ಶಾಂತಿ ದೊರಕಿ ಸಾವು ನೋವು ಸಂಭವಿಸದಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *