ರಾಜಕೀಯ ಹೈಡ್ರಾಮಕ್ಕೆ ತೆರೆ – 14 ತಿಂಗಳ ದೋಸ್ತಿ ಸರ್ಕಾರ ಪತನ

Public TV
1 Min Read

ಬೆಂಗಳೂರು: ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ. ಈ ಮೂಲಕ 18 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಪೂರ್ಣವಿರಾಮ ಬಿದ್ದಿದೆ.

ಇಂದಿನ ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಜೊತೆ ಬಿಎಸ್‍ಪಿಯ ಎನ್ ಮಹೇಶ್ ಗೈರಾಗಿದ್ದರು. ಇಂದು ದೋಸ್ತಿ ಪಕ್ಷದ ಒಟ್ಟು 99 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು.

ವಿಶ್ವಾಸಮತಯಾಚನೆ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಈ ಮೂಲಕ ಸಿಎಂ ಸಲ್ಲಿಸಿದ್ದ  ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ.

ಸದನದಲ್ಲಿ ಮಾತನಾಡಿದ ಸಿಎಂ, ನಾಡಿನ ಜನ ನಮ್ಮನ್ನು ಕ್ಷಮಿಸಲಾರರು. ಹೀಗಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ತಡವಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದರು. ಮನುಷ್ಯ ತಪ್ಪು ಮಾಡುವುದು ಸಹಜ. ಹೀಗಾಗಿ ಹೋದವರು ಮರಳಿ ಬರಬಹುದು ಎನ್ನುವ ಕಾರಣಕ್ಕೆ ವಿಳಂಬವಾಯಿತು ಎಂದು ತಿಳಿಸಿದರು.

ಜೆಡಿಎಸ್‍ನಿಂದ ರಾಜೀನಾಮೆ ಕೊಟ್ಟಿದ್ದ ಹುಣಸೂರು ಶಾಸಕ ಎಚ್ ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕೆ. ಆರ್ ಪೇಟೆಯ ನಾರಾಯಣ ಗೌಡ ಸದನಕ್ಕೆ ಬಂದಿರಲಿಲ್ಲ.

ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಯಶವಂತಪುರದ ಎಸ್.ಟಿ ಸೋಮಶೇಖರ್, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕೆ.ಆರ್ ಪುರಂನ ಭೈರತಿ ಬಸವರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಶಿವಾಜಿನಗರದ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್,  ವಿಜಯನಗರದ ಆನಂದ್ ಸಿಂಗ್  ಗೈರಾಗಿದ್ದರು.

ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಗವಾಡದ ಶ್ರೀಮಂತ ಪಾಟೀಲ್, ಬಳ್ಳಾರಿಯ ನಾಗೇಂದ್ರ ಸದನಕ್ಕೆ ಬಂದಿರಲಿಲ್ಲ. ಪಕ್ಷೇತರ ಶಾಸಕರಾದ ಮುಳಬಾಗಿಲು ಶಾಸಕ ಎಚ್ ನಾಗೇಶ್ ಹಾಗೂ ರಾಣೆಬೆನ್ನೂರು ಶಾಸಕ ಆರ್ ಶಂಕರ್ ಕೂಡ ಸದನಕ್ಕೆ ಗೈರು ಹಾಜರಿ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *