ಸುಂಕ ಸಮರದ ನಡುವೆ ಯುಎಸ್‌ ಅಧ್ಯಕ್ಷರನ್ನ ಭೇಟಿಯಾದ ಇಟಲಿ ಪ್ರಧಾನಿ – ಮೆಲೊನಿ ಶ್ರೇಷ್ಠ ಪ್ರಧಾನಿ ಎಂದ ಟ್ರಂಪ್‌

Public TV
2 Min Read

– ಅಮೆರಿಕದಲ್ಲಿ 9 ಲಕ್ಷ ಕೋಟಿ ಹೂಡಿಕೆ, ಇಂಧನ ಆಮದು ಹೆಚ್ಚಳ ಮಾಡುವುದಾಗಿ ಘೋಷಣೆ

ವಾಷಿಂಗ್ಟನ್‌: ಪ್ರಸ್ತುತ ನಡೆಯುತ್ತಿರುವ ವಾಣಿಜ್ಯ ಯುದ್ಧದ ನಡುವೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಭೇಟಿಯಾಗಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಮೆಲೊನಿ, ಟ್ರಂಪ್‌ ಅವರನ್ನ ಶ್ವೇತಭವನದಲ್ಲಿ ಭೇಟಿಯಾಗಿ ವ್ಯಾಪಾರ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

27 ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ಮೇಲೆ ಅಮೆರಿಕವು ಶೇ 25ರಷ್ಟು ಆಮದು ಸುಂಕ ಹೇರಿದೆ. ಇದರಲ್ಲಿ ಪ್ರಮುಖವಾಗಿ ಉಕ್ಕು, ಅಲ್ಯುಮಿನಿಯಂ ಮತ್ತು ಕಾರುಗಳು ಸೇರಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಉತ್ಪನ್ನಗಳ ಮೇಲೆ ಯುರೋಪ್‌ನಲ್ಲೂ ಸುಂಕ ಹೆಚ್ಚಳ ಮಾಡಲಾಗಿದೆ. ಇದರಿಂದ ಎರಡೂ ಕಡೆ ಒತ್ತಡ ಸೃಷ್ಟಿಯಾಗಿದೆ. ಈ ನಡುವೆ ಅಮೆರಿಕದ ಪ್ರತಿಸುಂಕದ ಬರೆಯಿಂದ ಪಾರಾಗಲು ಮೆಲೊನಿ ಅವರು ವಾಷಿಂಗ್ಟನ್‌ ಮತ್ತು ಯುರೋಪ್‌ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ನಡುವೆ ಟ್ರಂಪ್‌ ಸುಂಕ ವಿಧಿಸಿದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್‌ ನಾಯಕಿ ಮೆಲೊನಿ ಆಗಿದ್ದಾರೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್‌?

ಈ ಸಂರ್ಭದಲ್ಲಿ ಟ್ರಂಪ್‌, ಇಟಲಿ ಪ್ರಧಾನಿ ಮೆಲೊನಿ ಅವರನ್ನ ಹಾಡಿಹೊಗಳಿದ್ದಾರೆ. ಶ್ವೇತಭವನದಲ್ಲಿ ಮಾತನಾಡುತ್ತಾ, ಮೆಲೊನಿ ಅವರನ್ನ ತುಂಬಾ ಇಷ್ಟಪಡುತ್ತೇನೆ, ಅವರು ಶ್ರೇಷ್ಠ ಪ್ರಧಾನಿಯಾಗಿದ್ದು, ಯುರೋಪಿನಾದ್ಯಂತ ಸಂಚಲನ ಮೂಡಿಸಿದ್ದಾರೆ. ಇಟಲಿಯಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಅವರನ್ನು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ನಮ್ಮ ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಿದ್ದು, ಮುಂದೆಯೂ ಒಟ್ಟಿಗೆ ಸಾಗಲಿವೆ ಎಂದು ಗುಣಗಾನ ಮಾಡಿದರು. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ

ಇದೇ ವೇಳೆ ಉಭಯ ರಾಷ್ಟ್ರಗಳ ನಡುವೆ ಸುಂಕ, ವಲಸೆ ವಿಚಾರಗಳನ್ನು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಸುಂಕಗಳಿಂದ ಅಮೆರಿಕವು ಹೆಚ್ಚು ಪ್ರಯೋಜನ ಪಡೆಯುತ್ತಿದೆ. ಆತುರದಲ್ಲಿ ವ್ಯಾಪಾರ ಒಪ್ಪಂದ ಮಾಡಲು ಬಯಸುವುದಿಲ್ಲ ಎಂದು ಟ್ರಂಪ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮೆಲೊನಿ, ಇಟಾಲಿಯನ್‌ ಕಂಪನಿಗಳು ಅಮೆರಿಕದಲ್ಲಿ 10 ಬಿಲಿಯನ್‌ ಯುರೋಗಳನ್ನು (ಸುಮಾರು 9 ಲಕ್ಷ ಕೋಟಿ) ಹೂಡಿಕೆ ಮಾಡಲಿವೆ. ಜೊತೆಗೆ ಅಮೆರಿಕದಿಂದ ಇಂಧನ ಆಮದು ಹೆಚ್ಚಿಸಲಿವೆ ಎಂದು ಘೋಷಣೆ ಮಾಡಿದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

Share This Article