ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್‌, ದಾಳಿಕೋರ ಸಿಕ್ಕಿದ್ದು ಹೇಗೆ?

Public TV
3 Min Read

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿತಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಫ್ಲೋರಿಡಾದ (Florida) ಗಾಲ್ಫ್ ಕ್ಲಬ್ ನಲ್ಲಿದ್ದ ಟ್ರಂಪ್ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ, ಟ್ರಂಪ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೇ ವರ್ಷ ಜುಲೈ 13ರಂದು ಅವರ ಮೇಲೆ ಅಮೆರಿಕದ (USA) ಪೆನ್ಸಿಲ್ವೇನಿಯಾದಲ್ಲಿರುವ ಬಟ್ಲರ್ ಎಂಬಲ್ಲಿ ಗುಂಡಿನ ದಾಳಿಯಾಗಿತ್ತು. ಅಂದು ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರ ಮೇಲೆ ಸುಮಾರು 442 ಅಡಿಗಷ್ಟು ದೂರದಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಅಂದು ಹಾರಿದ ಗುಂಡು ಅವರ ಬಲಕಿವಿಯ ತುದಿಗೆ ತಾಕಿ ರಕ್ತ ಸೋರಿಕೆಯಾಗಿತ್ತು, ಕೂದಲೆಳೆ ಅಂತರದಲ್ಲಿ ಟ್ರಂಪ್‌ ಪಾರಾಗಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಟ್ರಂಪ್‌ ಬೆಂಬಲಿಗರ ಆತಂಕಕ್ಕೆ ಕಾರಣವಾಗಿದೆ.

ದಾಳಿ ನಡೆದಿದ್ದು ಎಲ್ಲಿ? ಹೇಗೆ?
ಫ್ಲೋರಿಡಾದ ಸ್ಥಳೀಯ ಕಾಲಮಾನ ಸೆ. 15ರಂದು ಸಂಜೆಯಲ್ಲಿ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್ ನಲ್ಲಿರುವ ತಮ್ಮದೇ ಗಾಲ್ಫ್ ಕ್ಲಬ್ ಆದ ಟ್ರಂಪ್ ಇಂಟರ್ ನ್ಯಾಷನಲ್ ಗಾಲ್ಫ್ ಕ್ಲಬ್‌ಗೆ (Golf Club) ಟ್ರಂಪ್ ಆಗಮಿಸಿದ್ದರು. ವಾರಾಂತ್ಯದಲ್ಲಿ ಗಾಲ್ಫ್ ಆಡುವುದು ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದರಿಂದ ಅವರು ಎಲ್ಲಿರುತ್ತಾರೋ ಅವರಿರುವ ಹತ್ತಿರದ ಯಾವುದೇ ಗಾಲ್ಫ್ ಕ್ಲಬ್ ಗೆ ಅವರು ಹೋಗುತ್ತಾರೆ. ಸೆ.15ರಂದು ಅವರು ಫ್ಲೋರಿಡಾದಲ್ಲೇ ಇದ್ದಿದ್ದರಿಂದ ತಮ್ಮ ಸ್ವಂತ ಗಾಲ್ಫ್ ಕ್ಲಬ್‌ಗೆ ಹೋಗಿದ್ದರು. ಗಾಲ್ಫ್ ಆಟ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

AK-47 ರೈಫಲ್‌ ಪತ್ತೆ:
ಫ್ಲೋರಿಡಾದ ಗಾಲ್ಫ್ ಕ್ಲಬ್‌ನ ಅಕ್ಕಪಕ್ಕದಲ್ಲಿ ಒಂದು ಎಕೆ-47 ರೈಫಲ್, ಟ್ರೆಕ್ಕಿಂಗ್ ಮಾಡುವವರು ಅಥವಾ ವ್ಲಾಗರ್‌ಗಳು ಬಳಸುವ ಗೋ ಪ್ರೋ ಕ್ಯಾಮೆರಾ, ಎರಡು ಬ್ಯಾಕ್ ಪ್ಯಾಕ್ (ಬ್ಯಾಗ್) ಸಿಕ್ಕಿವೆ. ಇದಲ್ಲದೇ, ಗಾಲ್ಫ್ ಕ್ಲಬ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಟ್ರಂಪ್ ಕಾರಿನ ಫೋಟೋ ತೆಗೆದುಕೊಳ್ಳುತ್ತಿದ್ದುದನ್ನು ತಾವು ನೋಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ಮಾಹಿತಿ ಸಂಗ್ರಹಿಸಿದ ಎಫ್‌ಬಿಐ ಏಜೆಂಟ್‌ಗಳು ಶಂಕಿತ ದಾಳಿಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಂಕಿತ ದಾಳಿಕೋರನ ಸೆರೆ:
ಗುಂಡಿನ ದಾಳಿ ನಡೆಸಿ ಓಡಿಹೋಗಿದ್ದ ವ್ಯಕ್ತಿಯನ್ನು ಇಂಟರ್ ಸ್ಟೇಟ್ ಹೈವೇ 75ರಲ್ಲಿ ಹಿಡಿಯಲಾಗಿದೆ ಎಂದು ಫ್ಲೋರಿಡಾದ ನಗರಾಡಳಿತದ ಮುಖ್ಯಸ್ಥರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಗಾಲ್ಫ್ ಕ್ಲಬ್ ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದ ಎಪ್‌ಬಿಐ ಸಿಬ್ಬಂದಿ, ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾರಂಭಿಸಿದ್ದರು. ಇದೇ ವೇಳೆ, ರಾಜ್ಯ ಹೆದ್ದಾರಿ 714ರ ಬಳಿಯೇ ಸಾಗುವ ಇಂಟರ್ ಸ್ಟೇಟ್ ಹೆದ್ದಾರಿ 75ರಲ್ಲಿ ವೇಗವಾಗಿ ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಶಂಕಿತ ದಾಳಿಕೋರ ಅದರಲ್ಲಿದ್ದುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶದಲ್ಲಿ ರಾಜಕೀಯ ಹಿಂಸಾಚಾರ ಅಥವಾ ಯಾವುದೇ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

Share This Article