ಹಾರ್ಮೂಜ್‌ ಬಿಕ್ಕಟ್ಟಿನ ಬಗ್ಗೆ ದೊಡ್ಡ ನಿರ್ಧಾರ – ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡುವಂತೆ ಟ್ರಂಪ್‌ ಆದೇಶ

2 Min Read

– ಅಪಾಯದಲ್ಲಿ ಭಾರತದ 10,000 ಕೋಟಿ ಮೌಲ್ಯದ ಸರಕು

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇರಾನ್ ಹೊತ್ತಿ ಉರಿಯುತ್ತಿದೆ. ಇದರ ನಡುವೆ ಹಾರ್ಮೂಜ್‌ ಜಲಸಂಧಿ ( Strait of Hormuz ) ಬಂದ್ ಆಗಿದೆ. ಇದರಿಂದ ಭಾರತೀಯ ಸರಕು ಸಾಗಣೆ ವಲಯ ಸಂಕಷ್ಟಕ್ಕೆ ಸಿಲುಕಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತೈಲ ಟ್ಯಾಂಕರ್‌ಗಳ ರಕ್ಷಣೆಗೆ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಕುರಿತು ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿರುವ ಟ್ರಂಪ್‌, ಅಗತ್ಯಬಿದ್ದರೆ ಹಾರ್ಮೂಜ್‌ ಜಲಸಂಧಿಯಲ್ಲಿ ಸಿಲುಕಿದ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡುವಂತೆ ಅಮೆರಿಕ ನೌಕಾಪಡೆಗೆ ಆದೇಶಿಸಿದ್ದಾರೆ. ಜೊತೆಗೆ ಕೊಲ್ಲಿ ಮೂಲಕ ಹಾದುಹೋಗುವ ಎಲ್ಲಾ ಹಡಗುಗಳಿಗೆ ರಾಜಕೀಯ ಅಪಾಯ ವಿಮೆ (PRI – Political Risk Insurance) ಮತ್ತು ಖಾತರಿಗಳನ್ನು ಒದಗಿಸುವಂತೆ ಯುನೈಟೆಡ್ ಸ್ಟೇಟ್ಸ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ಗೆ ನಿರ್ದೇಶನ ನೀಡಿದ್ದಾರೆ.

ಟ್ರಂಪ್‌ ಹೇಳಿರುವುದೇನು?
ಹಾರ್ಮೂಜ್‌ ಜಲಸಂಧಿಯಲ್ಲಿ 700ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ಲಾಕ್‌ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಟ್ರಂಪ್‌, ವಿಶ್ವದ ಇಂಧನ ಪೂರೈಕೆಗೆ ಅಡ್ಡಿಪಡಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಕೊಲ್ಲಿ ಮೂಲಕ ಹಾದುಹೋಗುವ ಎಲ್ಲಾ ಹಡಗುಗಳಿಗೆ ರಾಜಕೀಯ ಅಪಾಯ ವಿಮೆ ಮತ್ತು ಖಾತರಿ ಒದಗಿಸುವಂತೆ DFC ಗೆ ಆದೇಶಿಸಿದ್ದಾರೆ.

ಈ ವಿಮೆ ಸಮಂಜಸ ಬೆಲೆಯಲ್ಲಿ ಲಭ್ಯವಿರುವುದರಿಂದ ಯುದ್ಧದ ಭಯದಿಂದ ಹಡಗುಗಳು ನಿಲ್ಲಬೇಕಾಗಿಲ್ಲ. ಇದು ಎಲ್ಲಾ ಶಿಪ್ಪಿಂಗ್ ಲೈನ್‌ಗಳಿಗೆ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಅಗತ್ಯಬಿದ್ದರೆ ಯುಎಸ್ ನೌಕಾಪಡೆ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡಿ ಭದ್ರತೆ ಒದಗಿಸುತ್ತದೆ ಎಂದು ಟ್ರುತ್‌ ಸೋಷಿಯಲ್‌ನಲ್ಲಿ ವಿವರಿಸಿದ್ದಾರೆ. ಇದು ತೈಲ ಕೊರತೆ ಆತಂಕದಲ್ಲಿದ್ದ ವಿಶ್ವದ ಇತರ ರಾಷ್ಟ್ರಗಳೂ ನಿಟ್ಟುಸಿರು ಬಿಡುವಂತಾಗಿದೆ.

ಬ್ಯಾರಲ್‌ ತೈಲ ಬೆಲೆ 82 ಡಾಲರ್‌ಗೆ ಏರಿಕೆ
ಇನ್ನೂ ಹಾರ್ಮೂಜ್‌ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳು ಸಿಲುಕಿರುವುದರ ನಡುವೆ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾತೈಲದ ಫ್ಯೂಚರ್‌ಗಳು ಬ್ಯಾರೆಲ್‌ಗೆ 82.29 ಡಾಲರ್‌ಗೆ ಏರಿಕೆಯಾಗಿದೆ.

ಸಿಲುಕಿದ 27 ಭಾರತೀಯ ಹಡಗುಗಳು!
ಭಾರತ ಸರ್ಕಾರಕ್ಕೆ ಇಂಡಿಯನ್‌ ನ್ಯಾಷನಲ್ ಶಿಪ್‌ ಓನರ್ಸ್ ಅಸೋಸಿಯೇಷನ್ (INSA) ಪತ್ರ ಬರೆದಿದ್ದು, ಅದರಲ್ಲಿ 27 ಭಾರತೀಯ ಧ್ವಜವುಳ್ಳ ಹಡಗುಗಳು ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮತ್ತು 10,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸರಕು ಸಾಗಣೆ ಆಸ್ತಿಗೆ ಅಪಾಯ ಎದುರಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.

Share This Article