16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

Public TV
2 Min Read

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಜ್ಜಾಗುತ್ತಿರುವ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಕಾರ್ಯವರ್ಗಕ್ಕೆ ಈಗ ನಾಸಾ (NASA) ಮುಖ್ಯಸ್ಥರಾಗಿ ಬಿಲಿಯನೇರ್, ಗಗನಯಾತ್ರಿ ಜೇರೆಡ್ ಐಸಾಕ್‌ಮನ್  ಅವರನ್ನು (Jared Isaacman) ಆಯ್ಕೆ ಮಾಡಿದ್ದಾರೆ.

ಜೇರೆಡ್ ಐಸಾಕ್‌ಮನ್ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರ ಉದ್ದಿಮೆ ಪಾಲುದಾರರಾಗಿದ್ದಾರೆ. ಸ್ಪೇಸ್ ಎಕ್ಸ್ ಚಟುವಟಿಕೆಯಲ್ಲಿ ಜೆರ್ಡ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜೇರೆಡ್ ನೇಮಕ ಈಗ ಭಾರೀ ಟೀಕೆ-ಟಿಪ್ಪಣಿಗಳಿಗೆ ಕಾರಣವಾಗಿದೆ.

 

ಟ್ರಂಪ್‌ ಹೇಳಿದ್ದೇನು?
ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥರಾಗಿ ಲೋಕೋಪಕಾರಿ, ಪೈಲಟ್ ಮತ್ತು ಗಗನಯಾತ್ರಿ ಜೇರೆಡ್ ಐಸಾಕ್‌ಮನ್ಅ ವರನ್ನು ನಾಮನಿರ್ದೇಶನ ಮಾಡಲು ನಾನು ಸಂತೋಷಪಡುತ್ತೇನೆ.

ಕಳೆದ 25 ವರ್ಷಗಳಲ್ಲಿ Shift4 ನ ಸಂಸ್ಥಾಪಕ ಮತ್ತು CEO ಆಗಿ ಜೇರೆಡ್ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿಯನ್ನು ನಿರ್ಮಿಸಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ಬೆಂಬಲಿಸುವ ಡಿಫೆನ್ಸ್ ಏರೋಸ್ಪೇಸ್ ಕಂಪನಿಯಾದ ಡ್ರೇಕನ್ ಇಂಟರ್‌ನ್ಯಾಷನಲ್‌ ಸ್ಥಾಪಿಸಿದ್ದಾರೆ. ಜೇರೆಡ್‌ನ ಬಾಹ್ಯಾಕಾಶ, ಗಗನಯಾತ್ರಿ ಅನುಭವ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯಲು ಮತ್ತು  ನಾಸಾವನ್ನು ಹೊಸ ಯುಗದಲ್ಲಿ ಮುನ್ನಡೆಸಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಟ್ರಂಪ್‌ ಬಣ್ಣಿಸಿದ್ದಾರೆ.

ಯಾರು ಈ ಐಸಾಕ್‌ಮನ್?
41 ವರ್ಷದ ಜೇರೆಡ್ ಐಸಾಕ್‌ಮನ್ ಒಬ್ಬ ಪ್ರಮುಖ ಅಮೇರಿಕನ್ ವಾಣಿಜ್ಯೋದ್ಯಮಿ, ಪೈಲಟ್ ಮತ್ತು ಗಗನಯಾತ್ರಿಯಾಗಿದ್ದಾರೆ. ನ್ಯೂಜೆರ್ಸಿಯಲ್ಲಿ ಜನಿಸಿದ ಇವರು 16ನೇ ವಯಸ್ಸಿನಲ್ಲಿ ಪ್ರೌಢಶಾಲೆಗೆ ಗುಡ್‌ಬೈ ಹೇಳಿ ಪೋಷಕರ ನೆರವಿನಿಂದ Shift4 ಪಾವತಿ ಕಂಪನಿ ಸ್ಥಾಪಿಸಿದ್ದರು. ಇದನ್ನೂ ಓದಿ: ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್‌ ವಾರ್ನಿಂಗ್

ಈ ಪಾವತಿ ಸಂಸ್ಕರಣಾ ಕಂಪನಿಯು ಈಗ ಸರಿಸುಮಾರು 7.4 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದೆ. ಹಿಲ್ಟನ್ ಮತ್ತು KFC ನಂತಹ ಪ್ರಮುಖ ಬ್ರಾಂಡ್‌ಗಳಿಗೆ ಪಾವತಿ ವ್ಯವಸ್ಥೆಯಾಗಿ ಬಳಕೆಯಾಗುತ್ತಿದೆ.

ವಾಯುಯಾನದ ಬಗ್ಗೆ ಅಪಾರವಾದ ಆಸಕ್ತಿ ಬೆಳೆಸಿದ್ದ ಇವರು 2009ರಲ್ಲಿ ಲೆಟ್‌ ಜೆಟ್‌ನಲ್ಲಿ 62 ಗಂಟೆ ಸುತ್ತಿ ವಿಶ್ವದಾಖಲೆ ಬರೆದಿದ್ದರು.

ಸೆಪ್ಟೆಂಬರ್ 2024 ರಲ್ಲಿ ಸ್ಪೇಸ್‌ಎಕ್ಸ್‌ನಿಂದ (SpaceX Polaris Dawn Mission) ಹಮ್ಮಿಕೊಂಡಿದ್ದ ‘ಪೋಲಾರಿಸ್‌ ಡಾನ್‌ ಮಿಷನ್’‌ ಬಾಹ್ಯಾಕಾಶ ನಡಿಗೆ (Spacewalk) ಯಶಸ್ವಿಯಾಗಿತ್ತು ಮತ್ತು ನಾಲ್ವರು ಗಗನಯಾತ್ರಿಕರು ಅಂತರಿಕ್ಷದಲ್ಲಿ ಓಡಾಟ ನಡೆಸಿದ್ದರು. ಜೇರೆಡ್ ಐಸಾಕ್‌ಮನ್‌ ಖಾಸಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ ಮೊದಲ ವ್ಯಕ್ತಿಯಾಗಿದ್ದರು.

 

Share This Article