ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

Public TV
2 Min Read

– ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿ
– ಯುಎಸ್‌ನಲ್ಲಿ 600 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಡೀಲ್‌

ವಾಷಿಂಗ್ಟನ್‌: ಯುರೋಪಿಯನ್‌ ಒಕ್ಕೂಟದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನ (Biggest Trade Deal) ಘೋಷಣೆ ಮಾಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದಿಂದ ಬರುವ ಆಮದುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್‌ ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲೆ ಸುಂಕ ಸಮರ (Tariffs war) ಸಾರಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್‌ 14 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಆದ್ರೆ ಈ ಪಟ್ಟಿಯಲ್ಲಿ ಭಾರತವನ್ನ ಹೊರಗಿಟ್ಟಿದ್ದರು. ಮುಂಬರುವ ಆಗಸ್ಟ್‌ 1ರಿಂದ ಯುರೋಪಿಯನ್‌ ಒಕ್ಕೂಟದ (European Union) ರಫ್ತಿನ ಮೇಲೆ 30% ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿದ್ದರು. ಈ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, 30% ಸುಂಕದಿಂದ ಬಚಾವ್‌ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

ಸ್ಕಾಟ್ಲೆಂಡ್‌ನಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್‌ ನಡುವಿನ ಮಹತ್ವದ ಸಭೆಯಲ್ಲಿ ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಯುರೋಪಿನ್‌ನಿಂದ ರಫ್ತಾಗುವ ಆಟೋಮೊಬೈಲ್, ಔಷಧಗಳು ಮತ್ತು ಅರೆವಾಹಕ ಸೇರಿದಂತೆ ಇತರೇ ಸರಕುಗಳ ಮೇಲೆ 15% ಸುಂಕವನ್ನಷ್ಟೇ ವಿಧಿಸಲಾಗುತ್ತದೆ.

ನಾವು ಒಂದೊಳ್ಳೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಯಾವುದೇ ಸಾಮರ್ಥಯದಲ್ಲೂ ಈವರೆಗಿನ ಅತಿದೊಡ್ಡ ಒಪ್ಪಂದ ಇದೆಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

ಮುಂದುವರಿದು… ಜೊತೆಗೆ ಒಪ್ಪಂದದ ಭಾಗವಾಗಿ 27 ರಾಷ್ಟ್ರಗಳ ಯುರೋಪಿಯನ್‌ ಒಕ್ಕೂಟ ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿಸಲಿದೆ. ಜೊತೆಗೆ ಅಮೆರಿಕದಲ್ಲಿ 600 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

Share This Article