ಸಂಸತ್ತಿನಲ್ಲಿ ಭದ್ರತಾ ಲೋಪ | ಗಜ ದ್ವಾರದ ಬಳಿಯ ಮರ ಶಿಫ್ಟ್‌ಗೆ ನಿರ್ಧಾರ

Public TV
1 Min Read

ನವದೆಹಲಿ: ಹೊಸ ಸಂಸತ್‌ ಭವನದ (Parliament) ಆರು ದ್ವಾರಗಳಲ್ಲಿ ಒಂದಾದ ಮತ್ತು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೆಚ್ಚಾಗಿ ಬಳಸುವ ಗಜ ದ್ವಾರದ (Gaj Dwar) ಬಳಿ ಇರುವ ಟ್ಯಾಬೆಬುಯಾ ಅರ್ಜೆಂಟಿಯಾ ಮರವೊಂದು ಭದ್ರತೆಗೆ ಭಾರೀ ಸವಾಲಾಗಿದೆ. ಭದ್ರತೆಗೆ ಸಮಸ್ಯೆಯಾದ ಈ ಮರವನ್ನು ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಗುರುತಿಸಿದ್ದು, ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದೆ.

ಅಧಿಕೃತ ಮಾಹಿತಿ ಪ್ರಕಾರ, ನಂಬರ್ 01 ಎಂದು ಗುರುತಿಸಲಾದ ಮರವು ವಿವಿಐಪಿ ಮಾರ್ಗದಲ್ಲಿ ಸಂಭಾವ್ಯ ಭದ್ರತಾ ಅಡಚಣೆಯನ್ನು ಉಂಟುಮಾಡುತ್ತಿದೆ ಎಂದು ಎಸ್‌ಪಿಜಿ ಹೇಳಿದೆ. ಇದಕ್ಕಾಗಿ ಮರವನ್ನು ಬೇರೆಡೆಗೆ ಸ್ಥಳಾಂತರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಅರಣ್ಯ ಇಲಾಖೆಯಿಂದ‌ (Forest Department) ಅನುಮೋದನೆ ಕೋರಿದೆ. ಇನ್ನೂ ಅಧಿವೇಶನ ಮುಗಿದ ನಂತರ ಮರದ ಸ್ಥಳಾಂತರ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಸಂಸತ್‌ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ

ಸ್ಥಳಾಂತರ ಮಾಡಲಾಗುವ ಮರವನ್ನು ರಾಷ್ಟ್ರೀಯ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿರುವ (ಪ್ರೇರಣಾ ಸ್ಥಳ) ಸಂಸತ್ತಿನ ಸಂಕೀರ್ಣದೊಳಗೆ ನೆಡಲಾಗುತ್ತದೆ. ಸರಿಸುಮಾರು ಏಳು ವರ್ಷ ಹಳೆಯದಾದ ಈ ಮರ, ಕನಿಷ್ಠ ಆರೈಕೆ ಮತ್ತು ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯಬಲ್ಲದು.

ಮರ ಸ್ಥಳಾಂತರ ನಿಯಮಗಳ ಅನುಸಾರವಾಗಿ, ಈ ಮರವನ್ನು ಸ್ಥಳಾಂತರಿಸಿದ ಸುತ್ತ-ಮುತ್ತ ಬೇವು, ಅಮಲ್ತಾಸ್, ಪೀಪಲ್, ಬರ್ಗಡ್, ಶೀಶಮ್ ಮತ್ತು ಅರ್ಜುನ್‌ನಂತಹ ಸ್ಥಳೀಯ ಜಾತಿಗಳ 10 ಸಸಿಗಳನ್ನು ನೆಡಲು ಸಿಪಿಡಬ್ಲ್ಯೂಡಿ ಸಿದ್ಧವಿದೆ.

ಸಿಪಿಡಬ್ಲ್ಯೂಡಿ ಈಗಾಗಲೇ ಅರಣ್ಯ ಇಲಾಖೆಗೆ 57,000 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನೂ ಪಾವತಿಸಿದೆ. ಇನ್ನೂ ನೆಟ್ಟ ಸಸಿಗಳ ಜಿಯೋ-ಟ್ಯಾಗಿಂಗ್, ಏಳು ವರ್ಷಗಳವರೆಗೆ ಅವುಗಳ ನಿರ್ವಹಣೆ ಮತ್ತು ವಾರ್ಷಿಕ ಪ್ರಗತಿ ವರದಿಗಳನ್ನು ಸಲ್ಲಿಸುವುದು ಸಹ ಮರ ಸ್ಥಳಾಂತರದ ನಿಯಮದ ಅಡಿ ಬರುತ್ತದೆ.  ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

Share This Article