ಲಕ್ಕುಂಡಿಯಲ್ಲಿ ನಿಧಿ ಪತ್ತೆ – ನಿಧಿಯ 1 ಭಾಗ ಕುಟುಂಬಕ್ಕೆ, ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣದ ಭರವಸೆ

2 Min Read

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ (Lakkundi) ನಿಧಿ ಪತ್ತೆ ಪ್ರಕರಣದಲ್ಲಿ ಕೊನೆಗೂ ಕುಟುಂಬಕ್ಕೆ ಪರಿಹಾರದ ಭರವಸೆ ಸಿಕ್ಕಿದೆ. ಕುಟುಂಬಕ್ಕೆ ನಿಧಿಯ ಐದನೇ ಒಂದು ಭಾಗ ಹಾಗೂ ಮಾಲೀಕರ ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡೋದಾಗಿ ಘೋಷಿಸಿದ್ದಾರೆ.

ಸೋಮವಾರ (ಜ.12) ಲಕ್ಕುಂಡಿಯ ನಿಧಿ ಸಿಕ್ಕ ಸ್ಥಳಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಧಿ ಕಾಯ್ದೆ ಪ್ರಕಾರ ಕುಟುಂಬಕ್ಕೆ ಸಿಗಬೇಕಾದ ಪಾಲಿನ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿದ ಬೆನ್ನಲ್ಲೇ ಪುರಾತತ್ವ ಇಲಾಖೆ ನಿರ್ದೇಶಕ ಶೈಜೇಶ್ವರ್ ಅವರು, ನಿಧಿಯ ಐದನೇ ಒಂದು ಭಾಗವನ್ನು ಕುಟುಂಬಕ್ಕೆ ನೀಡೋದಾಗಿ ಭರವಸೆ ನೀಡಿದ್ದಾರೆ. ನಿಧಿಯ ಐದನೇ ಒಂದು ಭಾಗವನ್ನು ನಗದು ರೂಪದಲ್ಲಿ ಕುಟುಂಬಕ್ಕೆ ಪರಿಹಾರ ನೀಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಾಭರಣ ನಮ್ಮ ಪೂರ್ವಜರದ್ದು, ವಾಪಸ್ ನೀಡಿ – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

ಇನ್ನೂ ಬಾಲಕ ಪ್ರಜ್ವಲ್ ರಿತ್ತಿಗೆ ಸದ್ಯ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡೋದಾಗಿ ಲಕ್ಕುಂಡಿ ಬಿ.ಹೆಚ್ ಪಾಟೀಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸಿದ್ದು ಪಾಟೀಲ ಘೋಷಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮನೆ ಮಾಲೀಕರಾದ ಗಂಗವ್ವ ಹಾಗೂ ಮಗ ಪ್ರಜ್ವಲ್ `ಪಬ್ಲಿಕ್ ಟಿವಿ’ಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತೊಂದೆಡೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ಸ್ಥಳೀಯರು ಒಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನಿಧಿ ಸಿಕ್ಕ ಸ್ಥಳದಲ್ಲಿ ಲಕ್ಷ್ಮೀದೇವಿ ಗುಡಿ ಇದ್ದು ದೇವಸ್ಥಾನದ ಅಭಿವೃದ್ಧಿ ಮಾಡಬೇಕು. ದೇವಿಗೆ ಬಂಗಾರದ ತಾಳಿ, ಕಿರೀಟ ತಯಾರಿಸಿ ಕೊಡಬೇಕು. ಕುಟುಂಬಸ್ಥರಿಗೆ ಮನೆ ಕಟ್ಟಿ ಪರಿಹಾರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಗದಗ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿ, ಭೂಮಿಯೊಳಗೆ ಯಾವುದೇ ಮೌಲ್ಯಯುತ ವಸ್ತು ಸಿಕ್ರೆ ಸರ್ಕಾರಕ್ಕೆ ಸೇರಿದ್ದು, ಜಿಲ್ಲಾಡಳಿತ ಬಂಗಾರವನ್ನು ಸೇಫಾಗಿ ಇಟ್ಟಿದೆ ಎಂದಿದ್ದಾರೆ. ಕುಟುಂಬದ ಪ್ರಾಮಾಣಿಕತೆಯನ್ನು ನಾವು ಗೌರವಿಸುತ್ತೇವೆ ಅಂತ ಹೇಳಿದ್ದಾರೆ. ಡಿಸಿ ಕೂಡ ಕಾನೂನಿನಲ್ಲಿರುವ ಅವಕಾಶದಂತೆ ಕುಟುಂಬಕ್ಕೆ ನೆರವು ಕೊಡೋದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದ ಕುಟುಂಬಕ್ಕೆ ಭರವಸೆಗಳ ಮಹಾಪೂರವೇ ಹರಿದುಬಂದಿದೆ. ಇದನ್ನೂ ಓದಿ: ಭೂಮಿಯ ಒಳಗೆ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ: ಹೆಚ್‌ಕೆ ಪಾಟೀಲ್‌

Share This Article