ಬೆಂಗಳೂರು: 38 ತಿಂಗಳ ಅರಿಯರ್ಸ್ ಸಹಿತ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಬುಧವಾರ ಸಾರಿಗೆ ಮುಷ್ಕರ (Transport Strike) ನಡೆಸಲು ಮುಂದಾಗಿವೆ. ಒಂದು ಕಡೆ, ಸಾರಿಗೆ ಸಂಘಟನೆಗಳ ಜೊತೆ ಸಿಎಂ ತುರ್ತುಸಭೆ ನಡೆಸಿ ಸಂಧಾನಕ್ಕೆ ಯತ್ನಿಸಿದರೆ, ಇನ್ನೊಂದೆಡೆ ಒಂದು ದಿನದ ಮಟ್ಟಿಗೆ ಬಂದ್ ಮುಂದೂಡಿಕೆಗೆ ಹೈಕೋರ್ಟ್ ಸೂಚಿಸಿದೆ. ಆದರೆ ಹೈಕೋರ್ಟ್ (High Court) ಸೂಚನೆಯ ಮಧ್ಯೆಯೂ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಮುಷ್ಕರಕ್ಕೆ ಜಂಟಿ ಕ್ರಿಯಾ ಸಮಿತಿ ಮುಂದಾಗಿದೆ.
ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ (CM Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಇಂದು ಮಧ್ಯಾಹ್ನ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. 38 ತಿಂಗಳ ಅರಿಯರ್ಸ್ ಕೊಡಲು ತಾಂತ್ರಿಕ ಅಡ್ಡಿಯಿದೆ. ತಕ್ಷಣಕ್ಕೆ 14 ತಿಂಗಳ ಅರಿಯರ್ಸ್ ಕೊಡುತ್ತೇವೆ. 2023ರಲ್ಲಿ ವೇತನ (Salary) ಹೆಚ್ಚಳವಾಗಿರುವ ಕಾರಣ ಸಾರಿಗೆ ಕಾಯ್ದೆ ಪ್ರಕಾರ 2027ವರೆಗೆ ವೇತನ ಹೆಚ್ಚಳ ಅಸಾಧ್ಯ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ
ಸಾರಿಗೆ ನೌಕರರ ಬೇಡಿಕೆಗಳೇನು?
2020ರಿಂದ ನೀಡಬೇಕಿರುವ 38 ತಿಂಗಳ ಅರಿಯರ್ಸ್ (Arrears) ಬಿಡುಗಡೆಯಾಗಬೇಕು. 2024ರಿಂದ 25%ರಷ್ಟು ವೇತನ ಪರಿಷ್ಕರಣೆಯಾಗಬೇಕು. 2024 ರ ವೇತನ ಪರಿಷ್ಕರಣೆಯ 18 ತಿಂಗಳ ಅರಿಯರ್ಸ್ ಬಿಡುಗಡೆ ಆಗಬೇಕು. 4 ನಿಗಮದ ನೌಕರರಿಗೆ ನೀಡಬೇಕಿರುವ 38 ತಿಂಗಳ ಅರಿಯರ್ಸ್ 1,800 ಕೋಟಿ ರೂ. ಬಿಡುಗಡೆ ಮಾಡಬೇಕು. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್ ಸೂಚನೆ
ಸರ್ಕಾರದ ವಾದ ಏನು?
ಮಾರ್ಚ್ 1, 2023ರಂದು ವೇತನ (Salary) ಪರಿಷ್ಕರಣೆ ಒಪ್ಪಂದ ನಡೆದಿದ್ದು ಆಗ 15% ವೇತನ ಪರಿಷ್ಕರಣೆಗೆ ಒಪ್ಪಿಕೊಂಡಿದ್ದರು. ವೇತನ ಪರಿಷ್ಕರಣೆಗೆ ಶ್ರೀನಿವಾಸ್‌ಮೂರ್ತಿ ಸಮಿತಿ ರಚನೆಯಾಗಿದೆ. ಜನವರಿ 1, 2022ರಿಂದ ಫೆ.28, 2023ರ ತನಕ ಆರಿಯರ್ಸ್ ಬಿಡುಗಡೆ ಮಾಡಲಾಗುವುದು. 14 ತಿಂಗಳ ಆರಿಯರ್ಸ್‌ಗೆ 718 ಕೋಟಿ ರೂ. ವೆಚ್ಚವಾಗಲಿದೆ. 38 ತಿಂಗಳ ಆರಿಯರ್ಸ್ ಸಾಧ್ಯವಿಲ್ಲ, ಕೇಳುವುದು ಸಮಂಜಸ ಅಲ್ಲ.
ರಾಮಲಿಂಗಾರೆಡ್ಡಿ ಹೇಳಿದ್ದೇನು?
ಸಾರಿಗೆ ನೌಕರರಲ್ಲಿ ಎರಡು ಬಣ ಇವೆ. 2 ಬಣಗಳಲ್ಲಿ 14 ಸಂಘ ಸಂಸ್ಥೆಗಳು ಇವೆ. 38 ತಿಂಗಳ ಪರಿಷ್ಕೃತ ವೇತನ ಕೊಡಬೇಕು ಎಂದು ಆಗ್ರಹಿಸಿದರು. ಮಾರ್ಚ್ 01, 2023 ರಲ್ಲಿ ವೇತನ ಪರಿಷ್ಕರಣೆ ನಡೆದಿತ್ತು. ಸಿಎಂ 718 ಕೋಟಿ ರೂ. 14 ತಿಂಗಳ ಅರಿಯರ್ಸ್ ನೀಡುವುದಾಗಿ ಹೇಳಿದರೂ ಇವರು ಒಪ್ಪಿಲ್ಲ. ಈ ವರ್ಷದಿಂದ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಈ ವರ್ಷ ಚುನಾವಣೆ ನಡೆಸಲು ಅನುಮತಿ ಕೇಳಿದ್ದು, ನಾವು ಪರಿಶೀಲನೆ ನಡೆಸುವುದಾಗಿ ಹೇಳಿದ್ದೇನೆ. ಎರಡನೇ ಬಣ ಮುಷ್ಕರ ಮಾಡುತ್ತಿಲ್ಲ, ಧರಣಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ ಇರಲು ಬಿಜೆಪಿ ಕಾರಣವಂತೆ: ಏನಿದು ಆದೇಶ ಗೊಂದಲ?
ವೇತನ ಹೆಚ್ಚಳ ಬಗ್ಗೆ ಏನೂ ಹೇಳಿಲ್ಲ. ಅಧಿವೇಶನದ ಬಳಿಕ ನೋಡೋಣ ಎಂದಿದ್ದಾರೆ. 14 ತಿಂಗಳ ಅರಿಯರ್ಸ್‌ಗೆ ನಾವು ಒಪ್ಪಿಗೆ ನೀಡಿಲ್ಲ. ಶಿಸ್ತು ಕ್ರಮಕ್ಕೆ ನಾವು ಹೆದರುವುದಿಲ್ಲ. ಹತ್ತಾರು ಪ್ರತಿಭಟನೆ ಮಾಡಿದ ಅಭ್ಯಾಸ ನಮಗಿದೆ.ಬೆದರಿಕೆಗೆ ನಾವು ಬಗ್ಗುವುದಿಲ್ಲ.
– ವಿಜಯ್ ಭಾಸ್ಕರ್, ಜಂಟಿ ಕ್ರಿಯಾ ಸಮಿತಿ
ಜಂಟಿ ಕ್ರಿಯಾ ಸಮಿತಿಗೆ ಹೇಳಿದ್ದನ್ನು ನಮಗೆ ಹೇಳಿದ್ದಾರೆ. ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವ ಬಗ್ಗೆ ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ. ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಣಯ ಮಾಡಿಲ್ಲ. ಕಾನೂನು ತೊಡಕು ಬಂದಿರುವುದಿಂದ ನೋಡಬೇಕು.
– ಚಂದ್ರು, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ