Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

Public TV
2 Min Read

ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆಗೆ ಖರೀದಿ ಮಾಡಲು ಇಚ್ಛಿಸಿರುವ ಎಲೆಕ್ಟ್ರಿಟ್ ಬಸ್ ಸಂಸ್ಥೆಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂಬ ವರದಿಯ ಬಳಿಕವೂ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಬಸ್ಸುಗಳ ಖರೀದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಎಂಡಿ ನಡುವೆ ಬಿಗ್ ಫೈಟ್‍ಗೆ ಕಾರಣವಾಗಿದೆ.

ಸಾರಿಗೆ ಇಲಾಖೆ ಎಂಡಿ ಪೊನ್ನುರಾಜ್ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟದ ಕುರಿತು ಸಂಪೂರ್ಣ ವರದಿ ನೀಡಿದ್ದಾರೆ. ಇದರ ನಡುವೆಯೂ ಸದ್ಯ ಸಚಿವರು ಒಟ್ಟು 80 ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಸಂಪುಟ ಸಚಿವರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಬಸ್ ಖರೀದಿ ಹಿಂದೆ ಸಚಿವರ ಸ್ವ-ಹಿತಾಸಕ್ತಿ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಸದ್ಯ 126 ಕೋಟಿ ರೂ. ವೆಚ್ಚದಲ್ಲಿ 80 ಬಸ್‍ಗಳನ್ನ ಖರೀದಿಸಲು ಮುಂದಾಗಿದೆ ಎನ್ನಲಾಗಿದ್ದು, ಇದರಲ್ಲಿ 60 ಎಸಿ ಎಲೆಕ್ಟ್ರಿಕ್ ಬಸ್ ಹಾಗೂ ಉಳಿದಂತೆ 20 ನಾನ್ ಎಸಿ ಎಲೆಕ್ಟ್ರಿಕ್ ಬಸ್ ಖರೀದಿ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಸಾರಿಗೆ ಇಲಾಖೆ ನೇರ ಬಸ್ ಖರೀದಿ ಮಾಡುವುರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟ ಕಾರಣಗಳನ್ನು ಎಂಡಿ ಪೊನ್ನುರಾಜ್ ಅವರು ವರದಿ ನೀಡಿದ್ದಾರೆ. ಸಾರಿಗೆ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಕ್ಕಿಂತ ಅವುಗಳನ್ನು ಲೀಸ್‍ಗೆ ಪಡೆದು ಮೊದಲು ಪ್ರಯೋಗ ನಡೆಸಲು ಎಂಡಿ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಸ್ಕೀಮ್ ಅಡಿ ಮೆ|| ಗೋಲ್ಡ್ ಸ್ಟೋನ್ ಇನ್‍ಫ್ರಾಟೆಂಕ್ ಕಂಪೆನಿಯಿಂದ ಬಸ್ ಖರೀದಿಗೆ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಬಸ್ ಯಾಕೆ ಬೇಡ?
ಒಂದು ಎಲೆಕ್ಟ್ರಿಕ್ ಬಸ್‍ನ ಒಟ್ಟಾರೆ ವೆಚ್ಚದ ಶೇ. 60 ರಷ್ಟು ಮೌಲ್ಯ ಬ್ಯಾಟರಿ ಒಂದೇ ಹೊಂದಿರುತ್ತದೆ. ಈ ಬಸ್ಸುಗಳಲ್ಲಿ ಆಳವಡಿಸಿರುವ ಬ್ಯಾಟರಿಗಳನ್ನು ಐದು ವರ್ಷಕ್ಕೆ ಒಮ್ಮೆ ಬದಲಾವಣೆ ಮಾಡಬೇಕು. ಇದರಿಂದ ಬಸ್ಸುಗಳ ನಿರ್ವಹಣೆ ಅಧಿಕ ಆಗಲಿದೆ. ಅಲ್ಲದೇ ಒಂದೊಮ್ಮೆ ಎಲೆಕ್ಟ್ರಿಕ್ ಬಸ್‍ನ ಬ್ಯಾಟರಿ ಹಾಳಾದರೆ ಇಡೀ ಬಸ್ ಹಾಳಾಗುತ್ತದೆ. ಇದರಿಂದ ಒಂದು ಬಸ್ ಮೇಲೆ ಹೂಡಿಕೆ ಮಾಡಿರುವ ಮೊತ್ತ ಸಂಪೂರ್ಣ ನಷ್ಟವಾಗಲಿದೆ. ಬಸ್ಸಿನಲ್ಲಿ ಬಳಸುವ ಬ್ಯಾಟರಿಯನ್ನು ಲೀಥಿಯಂ ಎಂಬ ಮೆಟಲ್ ನಿಂದ ತಯಾರು ಮಾಡುತ್ತಾರೆ. ಈ ಲೀಥಿಯಂ ನಿಕ್ಷೇಪ ಭಾರತದಲ್ಲಿ ಕಡಿಮೆ ಇರುವುದರಿಂದ ಅದರ ಬೆಲೆಯೂ ಅಧಿಕವಾಗಿದೆ. ಆದರೆ ಚೀನಾದಲ್ಲಿ ಈ ಎಲೆಕ್ಟ್ರಿಕ್ ಬಸ್ ಸೇವೆ ಯಶಸ್ವಿಯಾಗಿದ್ದು, ಆದರೆ ಅಲ್ಲಿ ಲೀಥಿಯಂ ನಿಕ್ಷೇಪ ಹೆಚ್ಚಾಗಿರುವುದರಿಂದ ಅವರಿಗೆ ಅನುಕೂಲ ಆಗಿದೆ ಎಂಬ ಅಂಶ ಮುಂದಿಟ್ಟಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಡೀಸೆಲ್ ಬೆಲೆ ಹೆಚ್ಚಾಗಿದೆ ಎಂಬ ಅಂಶದ ಮೇಲೆ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಸುಮಾರು 126 ಕೋಟಿ ರೂಪಾಯಿ ಖರ್ಚು ಮಾಡಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿ ಚಿಂತನೆ ನಡೆಸಿದೆ. ಆದರೆ ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ನಿರಾಕರಿಸಿದ್ದರು. ಅಲ್ಲದೇ ಬಸ್ಸುಗಳ ನಿರ್ವಹಣೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣ ಮುಂದಿಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=amPQtHkZIq0

Share This Article
Leave a Comment

Leave a Reply

Your email address will not be published. Required fields are marked *