ಧೀರಜ್ ಎಂ.ವಿ ನಿರ್ದೇಶನ, ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ `ಕಪಟ ನಾಟಕ ಸೂತ್ರಧಾರಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಇದೇ ಜು.4ರಂದು ತೆರೆಕಾಣಲಿರುವ ಈ ಸಿನಿಮಾದ ಪ್ರಧಾನ ಕಥಾ ಸುಳಿವೊಂದು ಈ ಮೂಲಕ ಜಾಹೀರಾದಂತಾಗಿದೆ. ಭಾರತದ ಪ್ರಥಮ New Age Political Satire Cinema ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿಯಿರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ.ಇದನ್ನೂ ಓದಿ: ಶೈನ್-ಅಂಕಿತಾ ಸಿನಿಮಾಗೆ ನಟ ದೇವರಾಜ್ ಎಂಟ್ರಿ
ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗಳನ್ನು ಕಣ್ಣೆದುರು ತರುವಂತಹ ದೃಶ್ಯಗಳ ಮೂಲಕ ಈ ಟ್ರೈಲರ್ ಒಂದಷ್ಟು ಚರ್ಚೆಗೆ ಗ್ರಾಸವಾಗುವ ಮುನ್ಸೂಚನೆಯಿದೆ. ಈ ನೆಲದ ಜನಸಾಮಾನ್ಯರಲ್ಲಿ ಸಹಜವಾಗಿ ನೆಲೆಗೊಂಡಿರುವ ಧಾರ್ಮಿಕ ಭಾವನೆಗಳು ರಾಜಕಾರಣದ ಕಪಿಮುಷ್ಠಿಗೆ ಸಿಲುಕಿಕೊಂಡಿರುವ ಕಾಲಮಾನವಿದು. ಒಂದು ಸಮುದಾಯದ ನಂಬಿಕೆಯ ತಾಣಕ್ಕೆ ಮತ್ತೊಂದು ಸಮುದಾಯದ ಯುವಕ ಸಹಜ ಕುತೂಹಲದಿಂದ ಭೇಟಿ ನೀಡಿದಾಗ ನಡೆಯುವ ಘಟನೆ. ಈ ಸಂದರ್ಭದಲ್ಲಿ ಕಥನದ ಬಿಂದುವಿನಿಂದ ರೋಚಕ ಕಥನವೊಂದು ಬಿಚ್ಚಿಕೊಳ್ಳುವ ಬಿಂದು ಈ ಟ್ರೈಲರಿನಲ್ಲಿ ಕಾಣಿಸಿದೆ.
ಸಹಜವಾದ ದೃಶ್ಯಗಳ ಮೂಲಕ, ಗಹನವಾದ ಕಥೆ ಹೇಳಹೊರಟಂತೆ ಭಾಸವಾಗುವ ಟ್ರೈಲರ್ ಮೂಲಕ ಕಪಟ ನಾಟಕ ಸೂತ್ರಧಾರಿ ಪ್ರೇಕ್ಷಕರನ್ನು ಸೆಳೆದುಕೊಂಡಂತಿದೆ. ಹೊಸಬರೇ ಸೇರಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಹಿಂದೆ ಫಸ್ಟ್ ಲುಕ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಚಿತ್ರತಂಡ ಪ್ರೇಕ್ಷಕರಿಗೆ ಮುಖಾಮುಖಿಯಾಗಿತ್ತು. ಈ ಮೂಲಕ ಮೂಡಿಕೊಂಡಿದ್ದ ಕುತೂಹಲದ ನಡುವೆಯೇ ಟ್ರೈಲರ್ ಲಾಂಚ್ ಆಗಿದೆ.
ವಿಎಸ್ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಅಭಿರಾಮ ಅರ್ಜುನ ಈ ಸಿನಿಮಾದ ಬಿಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ಪ್ರಧಾನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಐಟಿ ವಲಯದಿಂದ ಬಂದಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ವಿರೇಶ್ ಎನ್ಟಿಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಪಟ ನಾಟಕ ಸೂತ್ರಧಾರಿ ಜು.4ರಂದು ಪ್ರೇಕ್ಷಕರ ಮುಂದೆ ಬರಲಿದೆ.ಇದನ್ನೂ ಓದಿ: Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ