ಕಾಲೇಜಿನಲ್ಲಿ ಟ್ರೆಡಿಷನಲ್ ಡೇ ಸಂಭ್ರಮ- ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

Public TV
2 Min Read

ಶಿವಮೊಗ್ಗ: ಅಲ್ಲಿ ಸಡಗರವಿತ್ತು, ಸಂಭ್ರಮವೂ ಇತ್ತು. ಎಲ್ಲೆಡೆ ಸಿಂಗಾರಗೊಂಡ ಲಲನೆಯರು ಅವಸರ ಅವಸರವಾಗಿ ಓಡಾಡಿಕೊಂಡಿದ್ದರು. ತಮ್ಮ ತಮ್ಮಲ್ಲೇ ಏನೋ ಒಂದು ಖುಷಿಯನ್ನು ಹಂಚಿಕೊಂಡು, ನಕ್ಕು ನಲಿದಾಡುತ್ತಿದ್ದರು. ಹುಡುಗರು ಕೂಡ ಎಂದೂ ಮಾಡಿಕೊಳ್ಳದ ಅಲಂಕಾರವನ್ನು ಮಾಡಿಕೊಂಡು, ಹುಡಿಗಿಯರಿಗಿಂತ ತಾವೇನು ಕಡಿಮೆಯಿಲ್ಲವೆಂಬಂತೆ ಓಡಾಡಿಕೊಂಡಿದ್ದರು. ಅಂದ ಹಾಗೆ ಅಲ್ಲಿ ಯಾರ ಮದುವೆನೂ ಇರಲಿಲ್ಲ, ಯಾವುದೇ ಶುಭ ಸಮಾರಂಭ ಕೂಡ ನಡೀತಾ ಇರಲಿಲ್ಲ. ಬದಲಾಗಿ ಇದು ಜಸ್ಟ್ ಟ್ರೆಡಿಷನಲ್ ಡೇ ಎಫೆಕ್ಟ್.

ಹೌದು. ಒಂದೆಡೆ ಸುಂದರವಾದ, ಬಣ್ಣ-ಬಣ್ಣದ ಸೀರೆಯನ್ನುಟ್ಟು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತಿದ್ದ ಕಾಲೇಜು ಕನ್ಯೆಯರು. ಇನ್ನೊಂದೆಡೆ ಭಾರತೀಯ ಆಚಾರ-ವಿಚಾರವನ್ನು ನೆನಪಿಸಿಕೊಡುವ ವಿದ್ಯಾರ್ಥಿಗಳ ವೇಷ ಭೂಷಣಗಳು. ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನಲ್ಲಿ ಇಂದು ಕಂಡು ಬಂದ ದೃಶ್ಯಗಳು. ಚುಮು ಚುಮು ಚಳಿಯಲ್ಲಿ ಸಕ್ಕತ್ತಾಗಿಯೇ, ಮೇಕಪ್ ಮಾಡಿಕೊಂಡು ಬಂದ ಸುಂದರ ಲಲನೆಯರು ಇಂದು ಮಿಂಚಿದ್ರು.

ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಎಂದಿನಂತೆ ಬಂದಿರಲಿಲ್ಲ. ಬದಲಾಗಿ ಬಣ್ಣ-ಬಣ್ಣದ ಮತ್ತು ನಕ್ಕಿಗಳಿಂದ ಶೃಂಗಾರಗೊಂಡ ಸೀರೆಯನ್ನುಟ್ಟು ಅಪ್ಪಟ ಭಾರತೀಯ ನಾರಿಯರಂತೆ ಕಂಗೊಳಿಸುತ್ತಿದ್ದರು. ವಿದ್ಯಾರ್ಥಿಗಳು ಕೂಡ ಇಂದು ಎಂದಿನಂತೆ ಕಾಲೇಜಿಗೆ ಬಾರದೇ ಕೊಂಚ ಡಿಫ್ರೆಂಟ್ ಸ್ಟೈಲ್ ನಲ್ಲಿ ಮಿಂಚಿದ್ರು. ಪಂಚೆ, ಶರ್ಟ್, ಶಲ್ಯದಲ್ಲಿ ಹಾಜರಾಗಿದ್ದರು. ಅದರಂತೆ ಕಾಲೇಜು ಕೂಡ ಇಂದು ಎಂದಿನಂತೆ ಇರಲಿಲ್ಲ. ಕಾಲೇಜು ಕೂಡ ನವ ವಧುವಿನಂತೆ ಶೃಂಗಾರಗೊಂಡು, ಅಂಗಳದ ತುಂಬ ರಂಗೋಲಿಯಿಂದ ಬಣ್ಣ ಬಣ್ಣದ ಕಲರ್ ಪೇಪರ್ ಗಳಿಂದ ಕಂಗೊಳಿಸುತ್ತಿತ್ತು. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಕಾಲೇಜಿನಲ್ಲಿ ಟ್ರೆಡಿಷನಲ್ ಡೇ ಅಂದರೆ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳ ಆಚರಣೆ ನಡೆಸಲಾಗಿತ್ತು.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸುಗ್ಗಿ ಸಂಭ್ರಮ ಮತ್ತು ಸಾಂಪ್ರಾದಾಯಿಕ ದಿನವನ್ನಾಗಿ ಇಂದು ಆಚರಿಸಲಾಯಿತು. ಇಂದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ-ತೊಡುಗೆಗಳ ಮತ್ತು ಸಂಸ್ಕೃತಿಯ ಪರಂಪರೆಯ ಬೇರುಗಳಿಗೆ ನೀರೆರೆದು ಪೋಷಿಸುವುದೇ ಈ ದಿನದ ಸ್ಪೆಷಲ್. ಇದಕ್ಕಾಗಿ ಇಂದು ಕಾಲೇಜಿನ ಎಲ್ಲಾ ತರಗತಿ ವಿದ್ಯಾರ್ಥಿಗಳು ಫುಲ್ ಜೂಂನಲ್ಲಿ ಬಂದಿದ್ದರು. ಅಷ್ಟೇ ಅಲ್ಲ ಕಾಲೇಜಿನ ಅಧ್ಯಾಪಕರು ಕೂಡ ಟ್ರೆಡಿಷನಲ್ ಡ್ರೆಸ್ ನಲ್ಲಿ ಮಿಂಚುತ್ತಿದ್ದರು.

ಇನ್ನು ಕಾಲೇಜಿನ ಆವರಣದಲ್ಲಿ ಸುಗ್ಗಿ ಸಂಭ್ರಮ ಸಾಂಪ್ರದಾಯಿಕ ದಿನವನ್ನು ಬಹಳ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಆಚರಿಸಿದ್ರು. ಹಳ್ಳಿಯಲ್ಲಿ ರೈತರು ಸಂಕ್ರಾಂತಿ ಹಬ್ಬದ ದಿನವನ್ನ ಹೇಗೆ ಆಚರಿಸುತ್ತಾರೋ ಅದೇ ರೀತಿಯಲ್ಲಿ ಕಬ್ಬನ್ನು ಜೋಡಿಸಿ, ಬೆಳೆದಂತಹ ಧವಸ-ಧಾನ್ಯಗಳನ್ನ ಇಟ್ಟು ರಾಶಿ ಪೂಜೆ ನೆರವೇರಿಸಿ ಈ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಈ ಕಾಲೇಜು ಇಂದು ಪಠ್ಯದ ಜೊತೆಗೆ ಸಾಂಸ್ಕೃತಿಕ, ಸಂಪ್ರದಾಯದ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮ ರೂಪಿಸಿದ್ದು, ಇದು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನದಾಗಿತ್ತು. ಕಾಲೇಜಿಗೆ ಬಂದಂತಹ ಅತಿಥಿಗಳು ಕೂಡ ಈ ಧಾನ್ಯಗಳ ರಾಶಿಗೆ ಪೂಜೆ ನೆರವೇರಿಸುವ ಮೂಲಕ, ಈ ಸಂಭ್ರಮಕ್ಕೆ ಚಾಲನೆ ನೀಡಿದ್ರು.

ಈ ವೇಳೆ ಫೋಟೋಗೆ ಫೋಸ್ ನೀಡಿದ ವಿದ್ಯಾರ್ಥಿಗಳು, ಸೆಲ್ಫಿಗೆ ಪೋಸ್ ಕೊಡುತ್ತಾ ನಕ್ಕು ನಲಿದಾಡಿದ್ರು. ಪರಸ್ಪರ ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಶುಭಾಶಯ ಕೋರಿದರು. ಒಟ್ಟಿನಲ್ಲಿ ಇಂದು ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿನಿಯರು ಇತರರಗಿಂತ ತಾವೇ ಸುರ ಸುಂದರಾಂಗಿಯರು ಎನ್ನುವಷ್ಟರ ಮಟ್ಟಿಗೆ ಶೃಂಗಾರಗೊಂಡು ಬಂದಿದ್ದರು. ಏನೇ ಆಗಲಿ ಕಾಲೇಜಿನ ವತಿಯಿಂದ ಇಂತಹ ಆಚರಣೆಗಳು, ವಿದ್ಯಾರ್ಥಿಗಳ ನೈತಿಕತೆ ಹೆಚ್ಚಿಸುವ ಮತ್ತು ಇತಿಹಾಸದ ಪರಂಪರೆಯ ಜ್ಞಾನ ಹೆಚ್ಚಿಸುವ ಕಾರ್ಯಕ್ರಮಗಳಾಗಬೇಕು. ಇದರಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಕಾಲೇಜಿನ ಉಪನ್ಯಾಸಕ ಪ್ರಕಾಶ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *