ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಶುಭ ಸುದ್ದಿ, ಎಥೆನಾಲ್ ನೀತಿ ಜಾರಿಗೆ ನಿರ್ಣಯ: ಮುನೇನಕೊಪ್ಪ

Public TV
2 Min Read

ಬೆಳಗಾವಿ: ರಾಜ್ಯದ ಕಬ್ಬು, ಮೆಕ್ಕೆಜೋಳ, ಭತ್ತ ಬೆಳಗಾರರನ್ನು ಆರ್ಥಿಕವಾಗಿ ಸಬಲ ಮಾಡುವ ನಿಟ್ಟಿನಲ್ಲಿ ಒಂದು ತಿಂಗಳ ಒಳಗಾಗಿ ಎಥನಾಲ್ ನೀತಿ ಜಾರಿಗೆ ನಿರ್ಣಯ ಸರ್ಕಾರ ನಿರ್ಧರಿಸಿದೆ ಎಂದು ಜವಳಿ ಮತ್ತು ಕೈಮಗ್ಗ ಅಭಿವೃದ್ಧಿ ಹಾಗೂ ಸಕ್ಕರೆ ಖಾತೆ ಸಚಿವರೂ ಆದ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಇವತ್ತು ಕಬ್ಬು ಬೆಳೆಗಾರರು, ಕಾರ್ಖಾನೆ ವ್ಯವಸ್ಥಾಪಕರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಲಭಿಸಬೇಕು ಎಂಬ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಎಥೆನಾಲ್ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್‌ ಮೇಲೆ ಅಧಿಕಾರಿಗಳ ದಾಳಿ

ಕೇಂದ್ರ ಸರ್ಕಾರ ಎಥೆನಾಲ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಪ್ರಸ್ತುತ ಎಥೆನಾಲ್ ಪರ್ಯಾಯ ಹಾಗೂ ಸಹ ಇಂಧನವಾಗಿ ಬಳಕೆಯಾಗುತ್ತದೆ. ಇದರಿಂದ ಇಂಧನ ಸಮಸ್ಯೆ ಉತ್ತರ ದೊರೆಯಲಿದ್ದು. ಹೆಚ್ಚಿನ ಉದ್ಯೋಗ ಸೃಷ್ಠಿಯಾಗಲಿದೆ. ಸರ್ಕಾರಕ್ಕೂ ಆದಾಯ ಬರುವುದು. ಎಥೆನಾಲ್ ಜಾರಿಗೊಳಿಸುವಿಕೆಯಿಂದ ಕಬ್ಬು ಬೆಳೆದ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಲಭಿಸಲಿದೆ, ಸಕ್ಕರೆ ಕಾರ್ಖಾನೆಗಳು ಸಹ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯಕ ವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಇತರೆ ರಾಜ್ಯಗಳಾದ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಎಥೆನಾಲ್ ಉತ್ಪಾದನೆ ಮಾಡುತ್ತಿರುವ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿ, ತ್ವರಿತವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು. ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಈ ಕುರಿತು ಎರಡು ದಿನಗಳ ಹಿಂದೆ ಸಲಹೆ ನೀಡಿದ್ದರು. ಇದಕ್ಕೆ ಸ್ಪಂದಿಸಿ ಇಂದು ಸಭೆ ನೆಡೆಸಿ ನಿರ್ದೇಶನ ನೀಡಲಾಗಿದೆ ಎಂದರು. ಇದನ್ನೂ ಓದಿ: ಸಕ್ರಿಯ ರಾಜಕಾರಣ ತ್ಯಜಿಸಿದ ಮೆಟ್ರೋಮ್ಯಾನ್ ಇ ಶ್ರೀಧರನ್

ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಉಮೇಶ್ ಕತ್ತಿ, ಶಿವರಾಮ್ ಹೆಬ್ಬಾರ್, ವಾದಕರಾದ ಪಿ.ರಾಜೀವ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರೈತ ಮುಖಂಡರು, ಕಾರ್ಖಾನೆ ಮಾಲಿಕರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *