ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ನದಿಗೆ ವಿಷಕಾರಿ ರಾಸಾಯನಿಕ ಬಿಡುಗಡೆ – ಕಲುಷಿತಗೊಂಡ ಕೃಷ್ಣೆಯ ಒಡಲು

Public TV
2 Min Read

ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಹಾರುವ ಬೂದಿ ನಿರ್ವಹಣೆ ಕೊರತೆಯಿಂದ ಇಲ್ಲಿನ ಜನ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಗಾಳಿಯಲ್ಲಿ ತೇಲಿ ಬರುವ ಬೂದಿ ಸಮಸ್ಯೆ ಒಂದೆಡೆಯಾದರೆ, ದ್ರವರೂಪದ ಬೂದಿ ಸಂಗ್ರಹಣ ಹೊಂಡಗಳಿಂದ ಈಗ ಹೊಸ ಸಮಸ್ಯೆ ಎದುರಾಗಿದೆ. ಕೃಷ್ಣಾ ನದಿಯನ್ನೇ (Krishna River) ಮಾಲಿನ್ಯ ಮಾಡಲು ಹೊರಟಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ನಾನಾ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ರಾಜ್ಯಕ್ಕೆ ಶೇ.45 ರಷ್ಟು ಪ್ರಮಾಣದ ವಿದ್ಯುತ್ ಸರಬರಾಜಾಗುತ್ತಿದೆ. ನಿಜ, ಆದರೆ ದೀಪದ ಕೆಳಗೆ ಕತ್ತಲು ಅನ್ನುವ ಹಾಗೇ ಇಡೀ ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಿಂದ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಗಾಳಿಯಲ್ಲಿ ತೇಲಿ ನೇರವಾಗಿ ಮನುಷ್ಯರ ಶ್ವಾಸಕೋಶ ಸೇರುವ ಬೂದಿ ಸಮಸ್ಯೆ ಹಾಗೂ ದ್ರವ ರೂಪದ ತಳಬೂದಿಯನ್ನ ನೇರವಾಗಿ ಕೃಷ್ಣಾನದಿಗೆ ಹರಿಸುವ ಮೂಲಕ ಆರ್‌ಟಿಪಿಎಸ್ (RTPS) ಹಾಗೂ ವೈಟಿಪಿಎಸ್ (YTPS)  ಅಧಿಕಾರಿಗಳು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನೂ ಓದಿ: ಸಂಡೂರು ಉಪ ಚುನಾವಣೆ – ಮಾಸ್ಟರಿಂಗ್ ಕಾರ್ಯ ಪೂರ್ಣ

ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಸುಟ್ಟಾಗ ಬೂದಿಯಾಗಿ ಬರುವ ಹಾರುವ ಬೂದಿ ನಾನಾ ರಾಸಾಯನಿಕ ಅಂಶಗಳನ್ನ ಹೊಂದಿರುತ್ತದೆ. ಇದಕ್ಕೆ ನೀರನ್ನ ಬೆರಸಿ ಹೊಂಡಕ್ಕೆ ಹರಿಸಲಾಗುತ್ತದೆ. ಈ ಹೊಂಡಗಳ ನಿರ್ವಹಣೆ ವೈಫಲ್ಯದಿಂದ ನಾನಾ ರಾಸಾಯನಿಕ ಪದಾರ್ಥಗಳ ಮಿಶ್ರಣವಾದ ಬೂದಿಯನ್ನ ನೇರವಾಗಿ ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಇದು ಜಲಚರಗಳಿಗೆ ಜೀವಕ್ಕೆ ಮಾರಕವಾಗಿದೆ. ಕೃಷ್ಣಾ ನದಿ ನೀರನ್ನೇ ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯಲು ಸರಬರಾಜು ಮಾಡುವುದರಿಂದ ಜನ ಈಗ ನೀರು ಕುಡಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿ ಪಾತ್ರದ ದೇವಸುಗೂರು ಸೇರಿದಂತೆ ಹಲವು ಹಳ್ಳಿಗಳ ಜನ ಈ ವಿದ್ಯುತ್ ಕೇಂದ್ರಗಳಿಂದ ನೇರ ದುಷ್ಪಪರಿಣಾಮಗಳಿಗೆ ಆಗಾಗ ತುತ್ತಾಗುತ್ತಲೇ ಇದ್ದಾರೆ. ಈ ಹಿಂದೆಯೂ ಬೂದಿಯನ್ನು ನೇರವಾಗಿ ಕೃಷ್ಣಾನದಿಗೆ ಬಿಡಲಾಗಿತ್ತು. ಜನ ಮೈತುರಿಕೆ ಸೇರಿದಂತೆ ಚರ್ಮರೋಗಗಳಿಗೆ ತುತ್ತಾಗಿದ್ದರು. ಆರೋಗ್ಯದ ಮೇಲೂ ನಾನಾ ಪರಿಣಾಮ ಬೀರಿತ್ತು. ಈಗ ಪುನಃ ನದಿಗೆ ಬೂದಿ ಎಗ್ಗಿಲ್ಲದೆ ಬಿಡಲಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲ ಹಾಗೂ ನದಿಯಲ್ಲಿ ನೀರು ತುಂಬಿ ಹರಿಯುವಾಗ ಯಾವ ಮುಲಾಜಿಲ್ಲದೆ ಬೂದಿಯನ್ನು ನದಿಗೆ ಬಿಡುತ್ತಾರೆ. ಆದರೆ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಿದ್ದಾಗ ಜನ ಹಾಗೂ ಜಲಚರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸಂಗ್ರಹವಾಗುವ ಬೂದಿಯನ್ನ ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿಗಳು ನೇರವಾಗಿ ನದಿಗೆ ಹರಿಬಿಟ್ಟು ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಬೂದಿ ಸಮಸ್ಯೆಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಜನರಿಗೆ ಈಗ ಹೊಸ ಸಮಸ್ಯೆ ತಲೆದೂರಿದಂತಾಗಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಕಾಣಿಸಿಕೊಳ್ಳುವ ಮೊದಲೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸಬೇಕಿದೆ.ಇದನ್ನೂ ಓದಿ: ಶಿವಮೊಗ್ಗ | ದಾನವಾಡಿ ಅರಣ್ಯದಲ್ಲಿ ಕಡವೆ ಬೇಟೆ – ಆರೋಪಿ ಅರೆಸ್ಟ್

Share This Article