ಚಿಕ್ಕಮಗಳೂರು: ವರ್ಷದ ಎಂಟೊಂಬತ್ತು ತಿಂಗಳು ಮಳೆ, ವರ್ಷಪೂರ್ತಿ ತಣ್ಣನೆಯ ಗಾಳಿ, ಚಳಿ ಹೀಗೆ ಅರ್ಧ ವರ್ಷ ಮಂಜಿನಿಂದಲೇ ಮುಳುಗೋ ಕಾಡಂಚಿನ ಗ್ರಾಮ (Kottigehara) ಕೊಟ್ಟಿಗೆಹಾರ. ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟಿಯಂತಹಾ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸಿಗುವ ಈ ಪುಟ್ಟ ಕೊಟ್ಟಿಗೆಹಾರ ಪ್ರವಾಸಿಗರ (Tourist) ಹಾಟ್‍ಸ್ಪಾಟ್ ಕೂಡ ಹೌದು. ಈ ಮಾರ್ಗದಲ್ಲಿ ಧರ್ಮಸ್ಥಳ, ಉಡುಪಿ ಹಾಗೂ ಮಂಗಳೂರಿಗೆ ಸಂಚರಿಸೋ ವಾಹನಗಳು ಇಲ್ಲೊಂದು ಸ್ಟಾಪ್ ಕೊಡದೇ ಮುಂದೆ ಹೋಗಲ್ಲ. ಈ ಮಾರ್ಗದಲ್ಲಿ ಹೋಗುವಾಗ ಹಲವು ದಶಕಗಳಿಂದಲೂ ಟೀ, ಕಾಫಿ (Coffee), ಲೆಮನ್ ಟೀ ಸವಿಯುತ್ತಿದ್ದ ಪ್ರವಾಸಿಗರು ಕೂಡ ಈಗ ಮಲೆನಾಡಿಗರ ಜೊತೆ ಬರಗಾಪಿಗೆ (Black coffee) ಫಿದಾ ಆಗಿದ್ದಾರೆ.
ಚಾರ್ಮಾಡಿ ಘಾಟಿಯ ತಪ್ಪಲು ಅಂದ್ರೆ ಕೇಳೋದೇ ಬೇಡ. ಗಾಳಿ-ಮಳೆ-ಚಳಿಗೆ ಬರವಿಲ್ಲ. ಒಂದಕ್ಕೊಂದು ಅಂಟಿಕೊಂಡ ಚೈನ್ ಲಿಂಕ್‍ನಂತೆ ವರ್ಷಪೂರ್ತಿ ಮಲೆನಾಡಿಗರ ಜೊತೆ ಪ್ರವಾಸಿಗರನ್ನು ಗಡಗಡ ನಡುಗಿಸುತ್ತೆ. ಅದರಲ್ಲೂ ಮೇ-ಜೂನ್‍ನಿಂದ ಅಕ್ಟೋಬರ್-ನವೆಂಬರ್ ವರೆಗೂ ಇಲ್ಲಿನ ಗಾಳಿ-ಚಳಿ-ಮಳೆಯ ಅಬ್ಬರ ಹೇಳೋದು ಅಸಾಧ್ಯ. ಆ ಚಳಿ-ಗಾಳಿ-ಮಳೆಯನ್ನ ಪ್ರವಾಸಿಗರಿಗಿಂತ ಮಲೆನಾಡಿಗರೇ ಹೆಚ್ಚು ಪ್ರೀತಿಸ್ತಾರೆ! ಅದನ್ನು ಪ್ರಕೃತಿಯ ಜೊತೆ ಸೇರಿ ಎಂಜಾಯ್ ಮಾಡ್ತಾರೆ. ಅಂತಹಾ ಕಾಡಂಚಿನ ಗ್ರಾಮದಲ್ಲೀಗ ಮಲೆನಾಡಿಗರು ಹಾಲಿಲ್ಲದ ಬರಗಾಪಿಗೆ ಮನಸೋತಿದ್ದಾರೆ. ಹೋಟೇಲ್-ಕ್ಯಾಂಟೀನ್ ಬಾಗಿಲಲ್ಲಿ ಬರಗಾಪಿ ಕುಡಿಯುತ್ತಿರುವುದನ್ನ ಕಂಡು ಪ್ರವಾಸಿಗರು ಕೂಡ ಅದೇ ಬೇಕು ಅಂತಿದ್ದಾರೆ. ಆ ಸ್ವಾದವನ್ನ ಅನುಭವಿಸುತ್ತಿದ್ದಾರೆ!
ಮೂಡಿಗೆರೆ ದಾಟಿ ಕೊಟ್ಟಿಗೆಹಾರ ಹೋಗುತ್ತಿದ್ದಂತೆ ಗಾಡಿ ಪಾರ್ಕ್ ಮಾಡುವ ಪ್ರವಾಸಿಗರು ಮೊದಲು ಕೇಳೋದು ನೀರು ದೋಸೆ. ನೆಕ್ಸ್ಟ್ ಬರಗಾಪಿ. ಇಲ್ಲಿನ ನೀರುದೋಸೆ ಕೂಡ ಅಷ್ಟೆ ಫೇಮಸ್. ಅದೇ ಸಾಲಿಗೆ ಈಗ ಬರಗಾಪಿಗೆ ಕೂಡ ಸೇರಿದೆ. ಕೊಟ್ಟಿಗೆಹಾರದಲ್ಲಿ ತಿಂಡಿ ತಿಂದು ಬರಗಾಪಿ ಕುಡಿದ ಹೋದ ಪ್ರವಾಸಿಗರು ಧರ್ಮಸ್ಥಳ-ಉಡುಪಿ-ಮಂಗಳೂರಿನಿಂದ ಹಿಂದಿರುಗುವಾಗ ಮತ್ತದೇ ನೀರುದೋಸೆ-ಬರಗಾಪಿಯನ್ನ ಮಿಸ್ ಮಾಡಿಕೊಳ್ಳಲ್ಲ. ಕೊಟ್ಟಿಗೆಹಾರ ತಪ್ಪಲಿನ ಹೋಟೆಲ್-ಕ್ಯಾಂಟೀನ್ ಮಾಲೀಕರು ಕೂಡ ಕಾಫಿ-ಟೀಗಿಂದ ಬರಗಾಪಿಯಲ್ಲೇ ಹೆಚ್ಚಾಗಿ ಲಾಭ ಕಾಣ್ತಿದ್ದಾರೆ. ಹಾಲಿನ ಟೀ-ಕಾಫಿ ಮಾಡೋದನ್ನ ಬಹುತೇಕ ಕಡಿಮೆ ಮಾಡಿದ್ದು, ಕೇಳಿದವರಿಗೆ ಮಾತ್ರ ಹಾಲಿನ ಕಾಫಿ-ಟೀ ಮಾಡಿಕೊಡ್ತಿದ್ದಾರೆ. ಈ ಬರಗಾಪಿಯ ಜಮಾನದಲ್ಲಿ ದಶಕಗಳಿಂದ ಖ್ಯಾತಿಯಾಗಿದ್ದ ಲೆಮನ್ ಟೀ ಕೂಡ ನೇಪಥ್ಯಕ್ಕೆ ಸರಿದಿದೆ.
ವರ್ಷಪೂರ್ತಿ ಮಳೆ-ಚಳಿ-ಗಾಳಿ ಎದುರಿಸೋ ಮಲೆನಾಡಿಗರು ಶೀತದ ವಾತಾವರಣದಲ್ಲಿ ದೇಹವನ್ನ ಉಷ್ಣದಲ್ಲಿಟ್ಟುಕೊಳ್ಳಲು ಬರಗಾಪಿಯ ಮೊರೆಹೋಗಿದ್ದಾರೆ. ಕೆಲವರು ಹಾಟ್ ಡ್ರಿಂಕ್ಸ್ ಮೊರೆ ಹೋದ್ರೆ ಕುಡಿತದ ಅಭ್ಯಾಸ ಲಿಮಿಟ್ ಹಾಗೂ ಇಲ್ಲದವರು ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳಲು ಬರಗಾಪಿಯ ದಾರಿ ಹುಡುಕಿಕೊಂಡಿದ್ದಾರೆ. ಸ್ಥಳಿಯರು ಕ್ಯಾಂಟೀನ್ ಬಾಗಿಲಿಗೆ ಬರುತ್ತಿದ್ದಂತೆ ಮಾಲೀಕ ಏನು ಬೇಕೆಂದು ಕೇಳೋದೇ ಇಲ್ಲ. ಸೀದಾ ಬಿಳಿ ಗಾಜಿನ ಲೋಟದಲ್ಲಿ ಬಿಸಿ-ಬಿಸಿಯಾಗಿ ಕಪ್ಪು ಕಾಫಿಯನ್ನ ತಂದಿಡ್ತಾನೆ. ಹಾಲಿಲ್ಲದ ಈ ಬರಗಾಪಿಯನ್ನ ಸ್ಥಳಿಯರು ಕೂಡ ಅಷ್ಟೆ ಖುಷಿಯಿಂದ ಆ ಸ್ವಾದವನ್ನ ಹೀರುತ್ತಾ ಕುಡಿಯುತ್ತಿದ್ದಾರೆ. ಮಲೆನಾಡ ಚಳಿಯಲ್ಲಿ ಬರಗಾಪಿಯ ರುಚಿ ಕಂಡಿರೋ ಕೆಲ ಪ್ರವಾಸಿಗರು ಕೂಡ ಹಾಲಿನ ಕಾಫಿ-ಟೀ ಬೇಡ. ಬರಗಾಪಿ ಕೊಡಿ ಎಂದು ಚಳಿ ಮಧ್ಯೆ ಹಾಲಿಲ್ಲದ ಬರಗಾಪಿ ಕುಡಿಯುತ್ತಾ ಎಂಜಾಯ್ ಮಾಡ್ತಿದ್ದಾರೆ.