ಊಟಿಯನ್ನೇ ನಾಚಿಸುವಂತ ಬ್ಯೂಟಿ – ನಂದಿ ಬೆಟ್ಟದಲ್ಲಿ ಮಿಂದೆದ್ದ ಪ್ರವಾಸಿಗರು

Public TV
1 Min Read

ಚಿಕ್ಕಬಳ್ಳಾಪುರ: ಪ್ರಕೃತಿಯ ಅನನ್ಯ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದು ಪ್ರವಾಸಿಗರು ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಮುಂಜಾನೆಯ ಮಂಜು, ಬೆಟ್ಟಗಳಿಗೆ ಮುತ್ತಿಕ್ಕುವ ಬೆಳ್ಳಿ ಮೋಡಗಳ ದೃಶ್ಯ ವೈಭವಗಳ ಮಧ್ಯೆ ಮಳೆಯಲಿ ಜೊತೆಯಲಿ, ಚುಮು ಚುಮು ಚಳಿಯಲಿ ಎಂಬಂತೆ ನಂದಿಬೆಟ್ಟದಲ್ಲಿ ಓಡಾಡಿದ ಪರಿಸರ ಪ್ರೇಮಿಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೇಲಿ ಹೋದರು. ಸೋನೆಯಂತೆ ಸುರಿದ ಮುಂಜಾನೆಯ ಮಂಜು, ಆಳತ್ತರಕ್ಕೆ ಬೆಳೆದು ನಿಂತಿರುವ ಮರಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿಯ ಹನಿಗಳ ನಡುವೆ ಕಣ್ಣಾಯಿಸಿದೆಡೆಯೆಲ್ಲಾ ಹಸಿರಿನ ಕಾನನ ಬೆಟ್ಟಕ್ಕೆ ಮುತ್ತಿಕ್ಕಿ ಮುಂದೆ ಸಾಗುವ ಬೆಳ್ಳಿ ಮೋಡಗಳು. ಚುಮು ಚುಮು ಚಳಿಯ ನಡುವೆ ಆಹ್ಲಾದಕರ ತಂಗಾಳಿಯಲ್ಲಿ ಮಿಂದೆದ್ದ ಪ್ರವಾಸಿಗರು ಹೊಸ ವರ್ಷದ ಹರುಷದಲ್ಲಿ ತೇಲಾಡಿದರು.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಾಲದಲ್ಲೇ ವಿಶ್ವವಿಖ್ಯಾತಿಯನ್ನು ಪಡೆದ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ತನ್ನ ಹಲವು ವೈಶಿಷ್ಟ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೇವಲ ಸಿನಿಮಾಗಳಲ್ಲಿ ವೈಭವದ ದೃಶ್ಯಕಾವ್ಯಗಳನ್ನ ನೋಡಿ ಆನಂದಿಸುತ್ತಿದ್ದ ಜನರು ಹೊಸ ವರ್ಷದ ನೆಪದಲ್ಲಿ ನಂದಿಬೆಟ್ಟಕ್ಕೆ ಬಂದು ನಂದಿಬೆಟ್ಟದ ಸೊಬಗನ್ನ ಕಣ್ತುಂಬಿಕೊಂಡರು. ಕಣ್ಣಿಗೆ ಸೊಬಗಿನ ಹಬ್ಬವಾದ್ರೆ, ಮನಸ್ಸು ಮುದದಿಂದ ತುಂಬಿ ಉಲ್ಲಾಸದಲ್ಲಿ ತೇಲಾಡಿದ್ರೇ, ಪ್ರೇಮಿಗಳಂತೂ ಕಲ್ಪನಾ ಲೋಕದಲ್ಲಿ ತೇಲಿ ಹೋದರು.

ಕರ್ನಾಟಕದ ಬಡವರ ಪಾಲಿನ ಊಟಿ ಎಂತಲೇ ಹೆಸರುವಾಸಿಯಾಗಿರುವ ನಂದಿ ಗಿರಿಧಾಮ ಅಬಾಲವೃದ್ಧರಾಗಿ ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಮಳೆಗಾಲ ಬಂದರೆ ಸಾಕು ಊಟಿಯನ್ನು ನಾಚಿಸುವಂತೆ ಬ್ಯೂಟಿಯಿಂದ ಕಂಗೊಳಿಸುತ್ತದೆ. ನೈಸರ್ಗಿಕ ಸೊಬಗಿನಿಂದಾಗಿ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುವ ನಂದಿ ಗಿರಿಧಾಮದ ವೈಭವ ಕಣ್ತುಂಬಿಕೊಂಡರು.

ಹೊಸ ವರ್ಷದ ಹಿನ್ನೆಲೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಸಾವಿರಾರು ಮಂದಿ ಬಂದಿದ್ದರಿಂದ ಗಿರಿಧಾಮದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರವಾಸಿಗರ ಹಿತದೃಷ್ಟಿಯಿಂದ ನಂದಿಗಿರಿಧಾಮದ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೆಲ ಪುಂಡಪೋಕರಿಗಳ ಕಾಟ ತಪ್ಪಿಸೋಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *