ಚಿಕ್ಕಮಗಳೂರು: ಕಾಫಿನಾಡಿನ ಅರಣ್ಯದೊಳಗೆ ವರ್ಷಪೂರ್ತಿ ಮೈದುಂಬಿ ಹರಿಯುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಫೆವರೆಟ್ ತಾಣವಾಗಿದ್ದು, ದಿನೇ ದಿನೇ ಈ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಚಿಕ್ಕಮಗಳೂರಿನಲ್ಲಿರುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿಗೆ ಆಗಮಿಸೋ ಪ್ರವಾಸಿಗರು ಇಲ್ಲಿಗೂ ತಪ್ಪದೇ ಭೇಟಿ ನೀಡುತ್ತಾರೆ. ಶೋಲಾ ಅರಣ್ಯದೊಳಗೆ ವರ್ಷದ 365 ದಿನವೂ ಮೈದುಂಬಿ ಹರಿಯುವ ಜಲಪಾತದಲ್ಲಿ ಪ್ರವಾಸಿಗರು ಆಟವಾಡಿ, ಫೋಟೋ ಶೂಟ್ ಮಾಡಿಸಿಕೊಂಡು ಮುಂದೆ ಖುಷಿಯಿಂದ ಮುಂದೆ ಸಾಗುತ್ತಾರೆ.
ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿ ಹೊನ್ನಮ್ಮನಹಳ್ಳ ಜಲಪಾತವಿದೆ. ಪ್ರವಾಸಿಗರು ಚಿಕ್ಕಮಗಳೂರಿನಿಂದ ಕೈಮರಕ್ಕೆ ಹೋಗಿ ಅಲ್ಲಿಂದ ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಹೊನ್ನಮ್ಮನಹಳ್ಳ ಜಲಪಾತ ಸಿಗುತ್ತದೆ. ರಸ್ತೆ ಪಕ್ಕದಲ್ಲೇ ಈ ಜಲಪಾತ ಸಿಗುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಪಶ್ಚಿಮ ಘಟ್ಟಗಳ ಸಾವಿರಾರು ಗಿಡಮೂಲಿಕೆಗಳ ನಡುವೆ ಹರಿದು ಬರುವ ಈ ನೀರಿನಲ್ಲಿ ಆರೋಗ್ಯಕಾರಿ ಶಕ್ತಿ ಇದೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗಾಗಿ ಪ್ರವಾಸಿಗರು ಈ ನೀರಲ್ಲಿ ಸ್ನಾನ ಮಾಡಿ, ನೀರನ್ನು ಬಾಟಲಿಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ.
ಹೊನ್ನಮ್ಮನಹಳ್ಳ ಫಾಲ್ಸ್ ಕೇವಲ ಕಣ್ಮನ ಸೆಳೆಯುವ ಸೌಂದರ್ಯವನ್ನು ಮಾತ್ರ ಹೊಂದಿರದೆ, ಜಲಪಾತದ ನೀರಿನಲ್ಲಿ ಪ್ರಾಕೃತಿಕ ಗಿಡಮೂಲಿಕೆಗಳ ಶಕ್ತಿ ಕೂಡ ತುಂಬಿವುರುವುದು ಪ್ರವಾಸಿಗರು ಇತ್ತ ಖುಷಿಯಿಂದ ಬರಲು ಪ್ರಮುಖ ಕಾರಣವಾಗಿದೆ. ಅದರಲ್ಲು ಮಳೆಗಾಲದಲ್ಲಿ ಜಲಪಾತ ಸೌಂದರ್ಯ ವರ್ಣಿಸಲು ಪದಗಳೆ ಸಾಲದು. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಹೊನ್ನಮ್ಮನಹಳ್ಳ ಜಲಪಾತ ಸೌಂದರ್ಯಕ್ಕೆ ಮರುಳಾಗದವರೆ ಇಲ್ಲ ಎನ್ನಬಹುದು.