ಮಡಿವಂತರೆಂದು ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೋಗೆ ದುಡ್ಡು ಸುರಿತಾರೆ: ಸಿಟಿ ರವಿ

Public TV
1 Min Read

ಉಡುಪಿ: ಕರ್ನಾಟಕದಲ್ಲಿ ಕ್ಯಾಸಿನೋ ಜೂಜು ಅಡ್ಡೆ ಆರಂಭಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿ ರಾಜ್ಯದ ಬೊಕ್ಕಸ ತುಂಬಿಸುವ ಯೋಜನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದೆ.

ಕ್ಯಾಸಿನೋ ಸೆಂಟರ್ ತೆರಯಬೇಕೆಂದು ನಾನು ನೇರವಾಗಿ ಎಲ್ಲೂ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗಾಯಿತೆಂದು ಹೇಳಿದ್ದೇನಷ್ಟೇ ಎಂದು ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯ ಕಾರ್ಕಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯೋಜನೆ ಸಿದ್ಧಪಡಿಸುವುದು ಸರ್ಕಾರದ ಕೆಲಸ. ನಾನು ಅಮೆರಿಕದಲ್ಲಿರುವ ವಾಸ್ತವಾಂಶವನ್ನಷ್ಟೇ ಹೇಳಿದ್ದೇನೆ. ಅಮೆರಿಕದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್ ಗಳಿವೆ. ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು. ಶ್ರೀಲಂಕಾ, ಲಾಸ್ ವೇಗಾಸ್‍ನಲ್ಲಿ ಭಾರತೀಯ ಪ್ರವಾಸಿಗರ ದಂಡೇ ಇದೆ ಎಂಬುದನ್ನು ಪ್ರಸ್ತಾವಿಸಿದ್ದೇನೆಯೇ ಹೊರತು, ಈ ಬಗ್ಗೆ ಯೋಜನೆ ಸಿದ್ಧಪಡಿಸಿಲ್ಲ ಎಂದು ಹೇಳಿದರು.

ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಮ್ಮ ದೇಶದ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಅದನ್ನು ತಡೆಗಟ್ಟಬೇಕು. ಪ್ರವಾಸಿಗರು ವಿದೇಶಕ್ಕೆ ದುಡ್ಡು ಹರಿದರೆ ನಮ್ಮ ದೇಶಕ್ಕೆ ನಷ್ಟ. ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರವಾಸಿ ತಾಣ ನಿರ್ಮಿಸುವ ಅಗತ್ಯವಿದೆ. ವಿದೇಶಿಗರನ್ನು ನಮ್ಮ ದೇಶಕ್ಕೆ ಸೆಳೆಯಬೇಕು, ನಮ್ಮವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗ ಸೃಷ್ಟಿಸುವ ಉದ್ದೇಶವೂ ನಮಗೆ ಇದೆ ಎಂದರು.

ಗೋವಾ ರಾಜ್ಯ ಕ್ಲಬ್ ಹಾಗೂ ಪಬ್‍ನಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ. ಯೋಜನೆ ಆರಂಭಕ್ಕೆ ಮೊದಲು ಗೃಹ ಇಲಾಖೆ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆಯಲ್ಲಿ ಹಲವಾರು ಚರ್ಚೆಯಾಗಿದೆ. ಕೃಷಿ ಟೂರಿಸಂ, ವಿಲೇಜ್ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಹೇಳಿದ್ದೇನೆ. ಕೇವಲ ಕ್ಯಾಸಿನೋ ಬಗ್ಗೆ ಮಾತ್ರ ಉಲ್ಲೇಖವಾಗಿದೆ. ನಮ್ಮ ಸಂಸ್ಕೃತಿಗೆ ವಿರೋಧವಾಗುತ್ತೆ ನಿಜ. ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದು ಸತ್ಯ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *