ಸೈಟ್‌ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ

Public TV
2 Min Read

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿಯೊಬ್ಬಳು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ಸೋತೇನಹಳ್ಳಿ ನಿವಾಸಿ ಪುಷ್ಪವತಿ (23) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರ ತಂದೆ ತಾಯಿಗೆ 4 ಮಂದಿ ಹೆಣ್ಣು ಮಕ್ಕಳಿದ್ದು, ಇವರು ಕೊನೆಯವರಾಗಿದ್ದರು. ದೊಡ್ಡಬಳ್ಳಾಪುರ ತಪಸೀಹಳ್ಳಿ ಗ್ರಾಮದ ವೇಣು ಎಂಬವನ ಜೊತೆ ಕಳೆದ 2024ರ ನವೆಂಬರ್‌ನಲ್ಲಿ ಲಕ್ಷ ಲಕ್ಷ ವರದಕ್ಷಿಣೆ (Dowry) ನೀಡಿ ಅದ್ದೂರಿಯಾಗಿ ಮದುವೆ ಮಾಡಿದ್ದರು. ವೇಣು ಮಾತ್ರ ಮದುವೆಯಾದರೂ ಹೆಂಡತಿ ಜೊತೆ ಸಂಸಾರ ಮಾಡುತ್ತಿರಲಿಲ್ಲವಂತೆ. ಇದನ್ನೂ ಓದಿ: ಮೈದುನನ ಜೊತೆ ಮಲಗೋಕೆ ಒತ್ತಾಯಿಸ್ತಿದ್ರು, ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದಾರೆ – ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

ಏನೋ ಸಮಸ್ಯೆ ಇರಬೇಕು ಎಂದು ವೈದ್ಯರಿಗೆ ತೋರಿಸೋಣ ಅಂದ್ರೂ ಮಾತು ಕೇಳಿಲ್ಲ. ಸರಿ ಅಂತ ಪುಷ್ಪವತಿ ಅತ್ತೆ ಭಾರತಿ ಮಾವ ಗೋವಿಂದಪ್ಪನ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಆದ್ರೆ ಮಗನನ್ನೇ ಬೆಂಬಲಿಸಿದ ಅತ್ತೆ ಮಾವ ದೊಡ್ಡಬಳ್ಳಾಪುರದಲ್ಲಿ ಒಂದು ನಿವೇಶನ ಕೊಟ್ರೆ ಮಾತ್ರ ಮಗ ಸಂಸಾರ ಮಾಡ್ತಾನೆ ಎಂದಿದ್ದರಂತೆ. ಅಷ್ಟಕ್ಕೂ ನಿನಗೆ ಮಗು ಮಾಡಿಕೊಳ್ಳಲು ಅರ್ಜೆಂಟ್ ಇದ್ರೆ ಚಿಕ್ಕ ಮಗ ಮೈದುನನ ಜೊತೆಯಲ್ಲೇ ಮಲಗು ಎಂದಿದ್ದರಂತೆ.

ತಿಂಗಳ ಹಿಂದೆ ನಡೆದ ಗಲಾಟೆ ವೇಳೆ ಪುಷ್ಪವತಿ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಆಗ ಪುಷ್ಪವತಿ ತವರು ಮನೆಗೆ ವಿಚಾರ ತಿಳಿಸಿ ಕೊನೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನೂ ದೂರು ದಾಖಲಾದ ನಂತರ ತವರು ಮನೆಯಲ್ಲೇ ಇದ್ದ ಪುಷ್ಪವತಿ ಮನೆಯಲ್ಲಿದ್ರೆ ಮನಸ್ಸು ಸರಿ ಇರಲ್ಲ ಅಂತ ಮತ್ತೆ ಉಪನ್ಯಾಸಕ ವೃತ್ತಿಗೆ ಸೇರಿಕೊಂಡಿದ್ದರು. ಕೆಲಸಕ್ಕೆ ಹೋಗಿ ಬರ್ತಿದ್ದ ಪುಷ್ಪವತಿಯನ್ನ ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಸ್ಟಾಂಡ್‌ನಲ್ಲಿ ಅಡ್ಡ ಹಾಕಿ ಗಂಡ ಆಕೆಯ ಮುಖಕ್ಕೆ ಉಗಿದು ಸಾರ್ವಜನಿಕರ ಎದುರೇ ನಮ್ಮ ಮೇಲೆಯೇ ಕಂಪ್ಲೇಂಟ್ ಕೊಡ್ತಿಯಾ‌? ನಿನಗೆ ನೋಡು ನಾನ್ ಒಂದು ಗತಿ ಕಾಣಿಸ್ತೀನಿ? ಮತ್ತೊಂದು ಮದುವೆ ಮಾಡ್ಕೊಂಡು ನಾನ್ ಏನ್ ಅಂತ ತೋರಿಸ್ತೀನಿ ಅಂತ ಧಮ್ಕಿ ಹಾಕಿ ಬೆದರಿಕೆ ಹಾಕಿದ್ದನಂತೆ. ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದ ಪುಷ್ಪವತಿ ಮರುದಿನ ಎಂದಿನಂತೆ ಕಾಲೇಜಿಗೆ ಅಂತ ಹೋದವಳು ಮನೆಗೆ ವಾಪಾಸ್ ಬಂದಿರಲಿಲ್ಲ. ಆದ್ರೆ ಎರಡು ದಿನದ ನಂತರ ಆಕೆಯ ಶವ ದೊಡ್ಡಬಳ್ಳಾಪುರ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಪತ್ತೆಯಾಗಿದೆ.

ಶನಿವಾರ ಕಾಲೇಜಿಗೆ ಪಾಠ ಮಾಡಲು ಹೋದ ಮಗಳು ಮನೆಗೆ ಬರಲಿಲ್ಲ ಅಂತ ಕುಟುಂಬಸ್ಥರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಲೊಕೇಷನ್ ಪತ್ತೆ ಮಾಡಿದಾಗ ಅವರ ಮೊಬೈಲ್ ಡ್ಯಾಂ ಬಳಿ ಪತ್ತೆಯಾಗಿತ್ತು. ಅಲ್ಲದೇ ಮೃತದೇಹ ಸಿಕ್ಕಿತ್ತು. ಮೊಬೈಲ್‌ನಲ್ಲಿ ವೀಡಿಯೋ ಸಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು, ವೇಣು ಹಾಗೂ ಮಾವ ಗೋವಿಂದಪ್ಪನನ್ನ ಬಂಧಿಸಿ, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳದ ಲಾಡ್ಜ್‌ನಲ್ಲಿ ನೇಣು ಬಿಗಿದು ಹಾಸ್ಟೆಲ್ ವಾರ್ಡನ್ ಆತ್ಮಹತ್ಯೆ

 

Share This Article