ಕೋಟೆನಾಡಲ್ಲಿ ಧಾರಾಕಾರ ಮಳೆ – 10 ಮನೆಗಳಿಗೆ ಹಾನಿ, ಐವರು ಆಸ್ಪತ್ರೆಗೆ ದಾಖಲು

Public TV
1 Min Read

ಚಿತ್ರದುರ್ಗ: ಮಳೆಯಿಲ್ಲದೆ (Rain) ಬರಡಾಗಿದ್ದ ಕೋಟೆನಾಡಲ್ಲಿ (Chitradurga) ಧಾರಾಕಾರವಾಗಿ ಸುರಿದ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ತೀವ್ರಗಾಳಿ ಮಳೆಯಿಂದ 10 ಮನೆಗಳಿಗೆ ಹಾನಿಯಾಗಿದ್ದು, ಐವರು ಗ್ರಾಮಸ್ಥರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಬಿಸಿಲ ಬೇಗೆಯಿಂದ ಬಸವಳಿದಿದ್ದ ಚಿತ್ರದುರ್ಗದ ಕೆಲವೆಡೆ ವರುಣ ತಡರಾತ್ರಿ ಆರ್ಭಟಿಸಿದ್ದಾನೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರ (Mallapura) ಗ್ರಾಮದಲ್ಲಿ ತೀವ್ರ ಗಾಳಿ ಮಳೆಗೆ ಸಿಲುಕಿದ ಖಾಸಗಿ ಶಾಲೆಯ ಕಬ್ಬಿಣದ ಶೀಟಿನ ಮೇಲ್ಚಾವಣಿ ತೇಲಿ ಬಂದು ಮನೆಗಳ ಮೇಲೆ ಅಪ್ಪಳಿಸಿದೆ. ಹೀಗಾಗಿ ಗ್ರಾಮದ 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ನೆಲಕ್ಕೆ ಕುಸಿದಿವೆ. ಗುಡುಗು ಸಿಡಿಲಿನ ಅಬ್ಬರಕ್ಕೆ ಗೋಡೆಗಳು ಬಿರುಕು ಬಿಟ್ಟಿವೆ. ಇದನ್ನೂ ಓದಿ: ಪರಿಷತ್‌ ಚುನಾವಣೆಯಲ್ಲೂ ಮೈತ್ರಿ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌; ಕಮಲಕ್ಕೆ 5, ಜೆಡಿಎಸ್‌ಗೆ 1 ಸ್ಥಾನ

ಮನೆಮೇಲೆ ಮಲಗಿದ್ದ ಕೃಷ್ಣಮ್ಮ ಎಂಬ ವೃದ್ಧೆ ಮೇಲೆ ಶೀಟು ಕುಸಿದಿದ್ದು, ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯವಾಗಿದೆ. ಭಾರೀ ಮಳೆಗೆ ಮನೆಯ ಶೀಟು ಕುಸಿದ ಪರಿಣಾಮ ಇಬ್ಬರು ಮಕ್ಕಳ ಸಹಿತ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ. ಮನೆಯೊಳಗೆ ನೀರು ನುಗ್ಗಿ ದವಸ-ಧಾನ್ಯ ನೀರುಪಾಲಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ-ಧಾನ್ಯ ಹಾಳಾಗುವುದರ ಜೊತೆ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಗ್ರಾಮಸ್ಥರು ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟ ಕೆಕೆಆರ್‌

ಇನ್ನು ಘಟನಾ ಸ್ಥಳಕ್ಕೆ ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕೃತಿ ವಿಕೋಪದಿಂದಾದ ನಷ್ಟಕ್ಕೆ ಅಗತ್ಯ ನೆರವನ್ನು ನೀಡುವ ಭರವಸೆ ನೀಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ವೀರೇಂದ್ರ ಪಪ್ಪಿ ಆಗಮಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಆದರೆ ಶಾಸಕರು ಬರಲಿಲ್ಲ. ಬದಲಾಗಿ ವೀರೇಂದ್ರ ಪಪ್ಪು ಅವರ ಸಹೋದರ ನಾಗರಾಜ್ ಗ್ರಾಮಕ್ಕೆ ಭೇಟಿ ನೀಡಿ ತಲಾ 5 ಸಾವಿರ ರೂ. ಪರಿಹಾರ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ 50 ಸ್ಥಾನ ಕೂಡ ಗಳಿಸಲ್ಲ: ಮೋದಿ ಭವಿಷ್ಯ

Share This Article