– ಮೂವರು ಯೋಧರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ (Pakistan) ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಯ ಪ್ರಮುಖ ಉಗ್ರ (Terrorists) ಸೇರಿದಂತೆ ಇಬ್ಬರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಸೇನೆಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ಗುಂಡು ಹಾರಿಸಿದ್ದಾರೆ. ಸೇನೆ ನಡೆಸಿದ ದಾಳಿಯಿಂದ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ
ಹತ್ಯೆಯಾದ ಎಲ್‌ಇಟಿಯ ಪ್ರಮುಖ ಉಗ್ರನನ್ನು ರೆಹಮಾನ್ ಭಾಯ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವನ್ನು ಗುಡ್ಡಾರ್ ಅರಣ್ಯ ಪ್ರದೇಶದಲ್ಲಿ ಸೇನೆ ಪತ್ತೆ ಹಚ್ಚಿದೆ.
ಕಾರ್ಯಾಚರಣೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಎರಡರಿಂದ ಮೂರು ಭಯೋತ್ಪಾದಕರು ಅಡಗಿರಬಹುದು ಎಂಬ ಶಂಕೆ ಇದೆ. ಈ ಭಾಗದಲ್ಲಿ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್